: ಮುರುಘಶ್ರೀ ವಿರುದ್ಧ ಮತ್ತಿಬ್ಬರು ಅಪ್ರಾಪ್ತೆಯರು ಲೈಂಗಿಕ ಕಿರುಕುಳದ ಆರೋಪ.? ಮೈಸೂರು, ಅ.13, 2022 : (.. ) ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಅಪ್ರಾಪ್ತರು ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದಾರೆ. ಈಗಾಗಲೇ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಮಠದ ಶರಣರ ವಿರುದ್ಧ ಇಂದು ಮತ್ತಿಬ್ಬರು 12 ಹಾಗೂ 14 ವರ್ಷದ ಬಾಲಕಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಚಿತ್ರದುರ್ಗದ ಬೃಹನ್ಮಠದ ಆಡಳಿತದ ವಿದ್ಯಾರ್ಥಿನಿಲಯದ ಈ ವಿದ್ಯಾರ್ಥಿನಿಯರು ತಮ್ಮ ಪೋಷಕರ ಜತೆಗೆ ಇಂದು ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿ ಸ್ವಾಮೀಜಿ ಅವರು ಲೈಂಗಿಕವಾಗಿ ತೊಂದರೆ ನೀಡುತ್ತಿರುವ ಬಗ್ಗೆ ದೂರು ನೀಡಿ ಸಹಾಯಕ್ಕೆ ಮೊರೆ ಹೊಕ್ಕರು.ಈ ಸಂಬಂಧ ಒಡನಾಡಿ ಸಂಸ್ಥೆ, ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಂಪರ್ಕಿಸಿ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿತು. ಮಕ್ಕಳ ಹೇಳಿಕೆ ಆಧಾರಿಸಿ ಸಮಿತಿ ಸ್ವಾಮೀಜಿ ವಿರುದ್ದ ಪೋಕ್ಸೊ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಆದೇಶಿಸಿದ್ದು, ಈ ಸಂಬಂಧ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ‘ಜಸ್ಟ್ ಕನ್ನಡ’ಗೆ ತಿಳಿಸಿವೆ. ಸ್ಪಷ್ಟನೆ : ಈ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗಪ್ತ ಅವರನ್ನು ಜಸ್ಟ್ ಕನ್ನಡ ಸಂಪರ್ಕಿಸಿದಾಗ, ಶರಣರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಸಂಬಂಧ ದೂರು ನೀಡಲು ಠಾಣೆಗೆ ಇನ್ನು ಯಾರು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. : - - ---