ಭೂ ಮಂಜೂರಾತಿಗೆ ಸುಗ್ರೀವಾಜ್ಞೆ ಶೀಘ್ರ: ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು,ಅಕ್ಟೋಬರ್9, 2022 (..):ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಕುರಿತಂತೆ ಅ. 11 ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕಾನು, ಸೊಪ್ಪಿನ ಬೆಟ್ಟ, ಸರ್ಕಾರಿ ಕಾನು, ಗೋಮಾಳ ಮತ್ತಿತರ ಕಂದಾಯ ಜಮೀನುಗಳ ಮಂಜೂರಾತಿಗೆ ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತುಗುದೂರು ಗ್ರಾಮ ವ್ಯಾಪ್ತಿಯ ಬೇಗುವಳ್ಳಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿ ಮಂಜೂರು ಉದ್ದೇಶಕ್ಕೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಗ್ರಾಮ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಒಪ್ಪಿಗೆ ನೀಡಿಲ್ಲ. ಜನಪ್ರತಿನಿಧಿಗಳ ಹಿತಕಾಯಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ