ಚಾಮುಂಡಿಬೆಟ್ಟದಲ್ಲಿ ರಥೋತ್ಸವ: ಎಲ್ಲೆಡೆ ಭಕ್ತ ಸಾಗರ ಮೈಸೂರು, ಅಕ್ಟೋಬರ್ 9, 2022 (..):ಚಾಮುಂಡಿ ಬೆಟ್ಟದಲ್ಲಿ ಇಂದು ಚಾಮುಂಡೇಶ್ವರಿ ದೇವಿಯ ದಿವ್ಯ ರಥೋತ್ಸವ ಸಂಭ‍್ರಮದಿಂದ ನಡೆಯಿತು. ಆಶ್ವಯುಜ ಶುಕ್ಲ ಪೂರ್ಣಮಿ ಉತ್ತರ ಭಾದ್ರ ನಕ್ಷತ್ರ ಬೆಳಗ್ಗೆ 7.50 ರಿಂದ 8.10 ರ ಒಳಗೆ ಸಲ್ಲುವ ಶುಭ ಮಹೂರ್ತದಲ್ಲಿ ರಥಾರೋಹಣ ಮಂಟಪೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಎಸ್.ಎ.ರಾಮದಾಸ್ ಇತರರು ಭಾಗವಹಿಸಿದ್ದರು. ಇನ್ನು ಧಾರ್ಮಿಕ ದತ್ತಿ ಇಲಾಖೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ಈ ಸಾಲಿನಲ್ಲಿ ಅ. 8 ರಿಂದ 14 ರವರೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಮಹಾ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಶನಿವಾರ ದೇವಿಯ ದೇವಾ ಲಯದಲ್ಲಿ ಬೆಳಗ್ಗೆಯಿಂದಲೇ ಆಶ್ವಯುಜ ಶುಕ್ಲ ಚತುರ್ದಶಿ ಪೂರ್ವಭಾದ್ರ ನಕ್ಷತ್ರ, ಕಳಶಾರೋಹಣದ, ಗಜಾರೋಹಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದಿದ್ದವು.