ವಿದ್ಯುತ್ ತಂತಿ ತುಳಿದು ಯುವಕ ಸಾವು: ಇಲಾಖೆ ಸಿಬ್ಬಂದಿ ವಿರುದ್ದ ಗ್ರಾಮಸ್ಥರಿಂದ ಆಕ್ರೋಶ ಮೈಸೂರು,ಜುಲೈ,27,2024 (..):ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಯಲ್ಲಿ ನಡೆದಿದ್ದು, ವಿದ್ಯುತ್ ಇಲಾಖೆ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಚೂನಾಯಕ(18) ಮೃತ ಯುವಕ ತಮ್ಮ ಜಮೀನಿನಲ್ಲಿ ಬಾಳೆಗೊನೆ ಕೊಯ್ಯಲು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದು ಎರಡು ದಿನ ಕಳೆದರೂ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳಿಂದ ಹಲವು ಬಾರಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯ ಸಂಪರ್ಕ ಕಡಿತಗೊಳಿಸುವಂತೆ ಮನವಿ ಮಾಡಿದ್ದರೂ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದೆ. ಲೈನ್ ಮೆನ್ ವಸಂತ್ ಎಂಬಾತನ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ವಿದ್ಯುತ್ ಇಲಾಖೆಯ ಎಇ ಜಯರತ್ನ ಅವರು ಭೇಟಿ ನೀಡಿದ್ದು ಇಲಾಖೆಯಿಂದ ಪರಿಹಾರ ತಲುಪಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಕುಟುಂಬದ ಒಬ್ಬ ವ್ಯಕ್ತಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದು, ನಿರ್ಲಕ್ಷ್ಯತೆಗೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಇಲಾಖೆಯಲ್ಲಿ ಕುಟುಂಬದ ಒಬ್ಬರಿಗೆ ಶಾಶ್ವತ ಕೆಲಸ ಕೊಡಿಸುವಂತೆ ಒತ್ತಾಯಿಸಿದ್ದಾರೆ. : , ,