ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್: ಕರಾವಳಿಯ ಎಲ್ಲ ಕೊಲೆ ತನಿಖೆ ಎನ್ ಎಐಗೆ ವಹಿಸಲಿ- ಹೆಚ್.ಡಿಕೆ ಆಗ್ರಹ. ಬೆಂಗಳೂರು,ಜುಲೈ,30,2022(..):ಕರಾವಳಿ ಕೊಲೆಗಳನ್ನು ನಿಯಂತ್ರಣ ಮಾಡಲಾಗದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರವಾಗಿ ಹರಿಹಾಯ್ದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ರಾಜ್ಯ ಬಿಜೆಪಿ ಸರಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ತನಿಖೆಗೆ ವಹಿಸಲು ಹಿಂಜರಿಯುತ್ತಿದೆ! ಏಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ʼಡಬಲ್ ಎಂಜಿನ್ ಸರಕಾರ ಡಬಲ್ ಗೇಮ್ʼ ಆಡುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ಪಕ್ಷ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣವನ್ನು ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ “ಶಾಂತಿ ಕಾಪಾಡಿ” ಎನ್ನುವ ಮಾತು ಬಂತಾ? ಬರಲಿಲ್ಲ. ನೆಮ್ಮದಿಗಾಗಿ ಕಿಂಚಿತ್ ಕ್ರಮ ವಹಿಸಿದಿರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು ಎಂದು ಕಿಡಿಕಾರಿದ್ದಾರೆ. ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. NIAಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ!! ಇದಲ್ಲವೇ ವಿಪರ್ಯಾಸ. ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ರಾಜ್ಯ ಬಿಜೆಪಿ ಸರಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ NIAಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ʼಸಮಾಧಿʼ ಕಟ್ಟಲು ಹೊರಟಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ.. ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ!! ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ. ಬೆಳ್ಳಾರೆ ಬೇಗೆ ಇಡೀ ಕರಾವಳಿಯನ್ನು ವ್ಯಾಪಿಸಿದೆ. ಆದರೆ, ಜೀವ ಭಯದಲ್ಲಿರುವ ಎರಡು ಕೋಮುಗಳ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಿದ್ದೀರಿ ಬೊಮ್ಮಾಯಿ ಅವರೇ? ಅವರ ಜೀವಕ್ಕೆ ಏನು ಖಾತರಿ ಕೊಟ್ಟಿದ್ದೀರಿ? ಪ್ರತಿ ಕೊಲೆ ಆದಾಗಲೂ ಈ ಕೊಲೆಪಾತಕ ರಾಜಕಾರಣ ನಮ್ಮ ಕುಟುಂಬಕ್ಕೇ ಕೊನೆಯಾಗಲಿ ಎನ್ನುವ ತಾಯಂದಿರ ಆರ್ತನಾದಕ್ಕೆ ನಿಮ್ಮ ಉತ್ತರವೇನು? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ. ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ. ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ. ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ ಎಂದು ಗುಡುಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆಗೆ ಹೆಚ್ ಡಿಕೆ ಖಂಡನೆ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂವಿಧಾನದ 4ನೇ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ. ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದ ವ್ಯಕ್ತಿ, ಕಲಾಪದಲ್ಲೇ ಮಹಿಳೆಯರ ಬಗ್ಗೆ ʼಕೊಳಕುʼ ಕಕ್ಕಿದ ಆಸಾಮಿ, ಸ್ವಾತಂತ್ರೋದ್ಯಾನದಲ್ಲಿ ನಾಯಕರ ಸಾಕ್ಷಿಯಾಗಿ 3-4 ತಲೆಮಾರುಗಳಿಗಾಗುವಷ್ಟು ಲೂಟಿ ಹೊಡೆದ ಲೆಕ್ಕ ಕೊಟ್ಟ ವ್ಯಕ್ತಿಯ ಅಸಲಿರೂಪ ಅನಾವರಣವಾಗಿದೆ ಎಂದು ಹೆಚ್ ಡಿಕೆ ಟೀಕಿಸಿದ್ದಾರೆ. : – –-