ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಟ್ವಿಟ್ಟರ್: ಪುನೀತ್ ಖಾತೆಗೆ ಮತ್ತೆ ಬ್ಲೂ ಟಿಕ್ ಬೆಂಗಳೂರು, ಜುಲೈ 19, 2022 (..):ಬ್ಲೂ ಟಿಕ್ ತೆಗೆದು ಹಾಕಿದ್ದ ಟ್ವಿಟ್ಟರ್ ಸಂಸ್ಥೆ ವಿರುದ್ಧ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಕ್ಕೆ ಸಂಸ್ಥೆ ಎಚ್ಚೆದ್ದುಕೊಂಡಿದೆ. ಟ್ವಿಟ್ಟರ್ ಮಾಡಿದ ಎಡವಟ್ಟಿನ ಕೆಲಸ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಟ್ವಿಟ್ಟರ್ ಮತ್ತೆ ವೆರಿಫೈಡ್ ಮಾರ್ಕ್ ವಾಪಸ್ ಹಾಕಿದೆ. ಅಂದಹಾಗೆ ಆಗಿದಿಷ್ಟು, ಟ್ವಿಟ್ಟರ್ ಸಂಸ್ಥೆ ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್ ಖಾತೆಗೆ ‘ಬ್ಲೂ ಟಿಕ್’ ನೀಡುತ್ತಿದ್ದು, ಇದರಿಂದ ಅಸಲಿ ಮತ್ತು ನಕಲಿ ಖಾತೆಗಳನ್ನು ಗುರುತಿಸಲು ಸಹಾಯವಾಗುತ್ತಿತ್ತು. ಹಾಗೆಯೇ ಪುನೀತ್ ರಾಜಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ನೀಡಲಾಗಿತ್ತು. ಪುನೀತ್ ರಾಜಕುಮಾರ್ ಅವರ ನಿಧನ ನಂತರ ಖಾತೆ ನಿಷ್ಕ್ರಿಯವಾಗಿದ್ದರಿಂದ ಟ್ವಿಟರ್ ಸಂಸ್ಥೆ ಬ್ಲೂ ಟಿಕ್ ಹಿಂಪಡೆದಿತ್ತು. ಆದರೆ ಅಭಿಮಾನಿಗಳು ಇದರಿಂದ ತೀವ್ರವಾಗಿ ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.