ವಾಲ್ಮೀಕಿ ಹಗರಣ ಅಧಿಕಾರಿಗಳ ತಲೆಗೆ ಕಟ್ಟಿ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಯತ್ನ- ಆರ್.ಅಶೋಕ್ ಬೆಂಗಳೂರು,ಜುಲೈ,20,2024 (..):ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನೆಲ್ಲ ಅಧಿಕಾರಿಗಳ ತಲೆಗೆ ಕಟ್ಟಿ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ. ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಕಳಚಿ ಬಿದ್ದಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕುವ ತೀರ್ಮಾನವನ್ನು ಕಾಂಗ್ರೆಸ್‌ ಮಾಡಿದೆ. ಅದಕ್ಕೆ ಕ್ಲೀನ್‌ ಚಿಟ್‌ ಕೊಟ್ಟುಕೊಂಡ ಸಿಎಂ ಸಿದ್ದರಾಮಯ್ಯ, ಎಲ್ಲ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ. ಹಗರಣದ ಬಗ್ಗೆ ಬಿಜೆಪಿ ಸುಮ್ಮನೆ ಆರೋಪ ಮಾಡಿಲ್ಲ. 40 ಪುಟಗಳ ದಾಖಲೆ, ಅಧಿಕಾರಿಗಳಿಬ್ಬರ ಸಂಭಾಷಣೆ ಕ್ಲಿಪ್ಪಿಂಗ್ ಸಹಿತ ಚರ್ಚಿಸಿದ್ದೇವೆ. ಆದರೆ ಸದನದಲ್ಲಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದರು. ಅಕ್ರಮವಾಗಿ ವರ್ಗಾವಣೆಯಾದ ಹಣ ಚುನಾವಣೆಗೆ ಬಳಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆ ನೀಡಿದೆ. ಮಾಜಿ ಸಚಿವ ನಾಗೇಂದ್ರರನ್ನು ಜೈಲಿಗೆ ಕಳುಹಿಸಿದ್ದಾರೆ. ಶಾಸಕ ಬಸನಗೌಡ ದದ್ದಲ್ ವಿಚಾರಣೆ ನಡೆಸಿದ್ದಾರೆ. ಕ್ಲೀನ್ ಚಿಟ್ ನೀಡುತ್ತಿದ್ದೀರಿ. ತಾಕತ್ತಿದ್ದರೆ ಇ‌.ಡಿಯವರ ವಿರುದ್ಧ ಕೇಸ್ ದಾಖಲಿಸಿ ಎಂದು ಆರ್.ಅಶೋಕ್ ಸವಾಲು ಹಾಕಿದರು. : , , .