ಮತ್ತೆ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ ಸಚಿವ ಉಮೇಶ್ ಕತ್ತಿ. ಮೈಸೂರು,ಜೂನ್,30,2022(..):ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಪ್ರತೇಕ ರಾಜ್ಯದ ಧ್ವನಿ ಎತ್ತಿದ್ದು, ಅಭಿವೃದ್ಧಿ ವಿಚಾರವಾಗಿ ಪ್ರತ್ಯೇಕ ರಾಜ್ಯವಾಗಬೇಕು ಎಂದು ಪುನರುಚ್ಚಾರ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ದೇಶದಲ್ಲಿ 30 ರಾಜ್ಯಗಳಿವೆ. ಈ ಪೈಕಿ 50 ರಾಜ್ಯಗಳನ್ನಾಗಿ ಮಾಡಬೇಕು ಎನ್ನುವ ಚರ್ಚೆ ಆಗ್ತಿದೆ. ಉತ್ತರ ಪ್ರದೇಶದಲ್ಲಿ 21 ಕೋಟಿ ಜನಸಂಖ್ಯೆ ಇದ್ದು 4 ರಾಜ್ಯವಾಗಬೇಕು. ಮಹಾರಾಷ್ಟ್ರದಲ್ಲಿ 11 ಕೋಟಿ ಜನಸಂಖ್ಯೆ ಇದ್ದು ಅದನ್ನು 3 ರಾಜ್ಯ ಮಾಡಬೇಕು. ಅದರಂತೆ ಕರ್ನಾಟಕ ಆರುವರೆ ಕೋಟಿ ಜನಸಂಖ್ಯೆ ಇದೆ. ಈ ಹಿನ್ನೆಲೆ ಎರಡು ರಾಜ್ಯಗಳಾಗಿ ವಿಂಗಡಣೆ ಆಗಬೇಕು ಎಂದರು. ನಾನು 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯವಾಗಬೇಕು. ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿದ್ದು ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರೇ. ಕರ್ನಾಟಕ ಎರಡು ಭಾಗ ಆಗಬೇಕು, ನಾವು ಕೂಡಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ನಾವು ಅಚಲ ಕನ್ನಡಿಗರು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಪ್ರತ್ಯೇಕ ರಾಜ್ಯ ಹೇಳಿಕೆಗೆ ಕಾಂಗ್ರೆಸ್ ಟೀಕಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ಸಿದ್ದರಾಮಯ್ಯಗೆ ಮಾಡೋಕೆ ಕೆಲಸ ಇಲ್ಲ. ಪದೇ ಪದೇ ಉಮೇಶ್ ಕತ್ತಿ ಲೋಫರ್, ಲಫಂಗ ಅನ್ನೋ ಬದಲು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಚಿಂತನೆ ಇಲ್ಲ. ಹಿಂದೆ ಪಾದಯಾತ್ರೆ ಮಾಡಿ ಆಲಮಟ್ಟಿ ಅಭಿವೃದ್ಧಿ ಮಾಡ್ತಿವಿ ಅಂದ್ರು, ಮಾಡಿದ್ರಾ.? ಕಾಂಗ್ರೆಸ್ ಅವಧಿಯಲ್ಲೇ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ. ಸುಮ್ಮನೆ ಇಲ್ಲಸಲ್ಲದ ಮಾತುಗಳನ್ನು ಆಡಿದ್ರೆ ನಾವೂ ಕೂಡಾ ತಿರುಗೇಟು ನೀಡ್ತೇವೆ. ಪ್ರತ್ಯೇಕ ರಾಜ್ಯವನ್ನ ಜನ ಬಯಸಿದ್ದಾರೆ. ಜನರ ಮನವಿಗೆ ಸ್ಪಂದಿಸುವ ಕೆಲಸವನ್ನ ನಾವು ಮಾಡಬೇಕು ಎಂದು ಹೇಳಿದರು. : - - – .