: ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ ಸಹಿ. ಮೈಸೂರು, ಮೇ 12, 2022 : (.. ) ಮೈಸೂರು ವಿಶ್ವವಿದ್ಯಾಲಯದ ಜೆನೆಟೆಕ್ ಹಾಗೂ ಜಿನೊಮಿಕ್ ವಿಭಾಗ, ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ ಸಹಿ ಹಾಕಲಿದೆ. ಇಂದು ಬೆಳಿಗ್ಗೆ 10.30 ಕ್ಕೆ ವಿಜ್ಞಾನ ಭವನದಲ್ಲಿ ಒಡಂಬಡಿಕೆಗೆ ಮೈಸೂರು ವಿವಿ ಕುಲಪತಿ ಪ್ರೊ . ಜಿ . ಹೇಮ೦ತ್ ಕುಮಾರ ಹಾಗೂ ರಾಮನಗರದ ಡಿಸಿಎಫ್ ವಿ.ದೇವರಾಜು ಸಹಿ ಹಾಕುವರು. ಇದೇ ವೇಳೆ ಕೊಳ್ಳೇಗಾಲದ ಡಿಸಿಎಫ್ ವಿ.ಏಡುಕುಂಡಲು, ಬಾಂಬೆ ನ್ಯಾಚುರಲ್ ಸೊಸೈಟಿಯ ರಣಹದ್ದು ಸಂರಕ್ಷಣಾ ಕಾರ್ಯಕ್ರಮದ ಮುಖ್ಯಸ್ಥ ಡಾ.ವಿಭು ಪ್ರಕಾಶ್ ಮಾಥುರ್ ಅವರು ವಿವಿಧ ವಿಷಯಗಳನ್ನು ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ.ಈ ಕಾರ್ಯಕ್ರಮವನ್ನು ಯುಟ್ಯೂಬ್‌ನಲ್ಲಿ ಯುಒಎಂ ಲೈವ್ ಚಾನಲ್ ಹಾಗೂ ಜೂಮ್ ಆ್ಯಪ್‌ನಲ್ಲಿ (ಐಡಿ: 82025971796 ಪಾಸ್‌ವರ್ಡ್ 298189) ವೀಕ್ಷಿಸಬಹುದು. ಈ ಅಪರೂಪದ ಸಂಶೋಧನೆ ಬಗ್ಗೆ ಯೋಜನೆಯ ಪ್ರಧಾನ ಸಂಯೋಜಕಿ ಪ್ರೊ.ಎಸ್.ಎಸ್. ಮಾಲಿನಿ ಅವರು ಹೇಳಿದಿಷ್ಟು…ರಾಮನಗರದ ರಾಮದೇವರ ಬೆಟ್ಟದ ರಣಹದ್ದು ಸಂರಕ್ಷಣಾ ಧಾಮದಲ್ಲಿ ವಿಭಾಗದ ತಜ್ಞರು ರಣಹದ್ದುಗಳ ಡಿಎನ್‌ಎ ಸಂಗ್ರಹಿಸಿ ಆ ಮೂಲಕ ಅವುಗಳ ಸಂಖ್ಯೆಯನ್ನು ನಿರ್ಣಯಿಸಲಿದ್ದಾರೆ. ಜತೆಗೆ, ಇದರ ಡಿಎನ್‌ಎ ಬ್ಯಾಂಕ್‌ನ್ನು ಮಾಡಿ, ಮುಂಬರುವ ಸಂಶೋಧನೆಗೆ ಬುನಾದಿ ಹಾಕಲಿದ್ದಾರೆ. “ರಾಮದೇವರಬೆಟ್ಟದಲ್ಲಿ ರಣಹದ್ದುಗಳ ಪಿಕ್ಕೆ ಹಾಗೂ ಗರಿಗಳನ್ನು ಸಂಗ್ರಹಿಸುವ ಸಂಶೋಧಕರ ತಂಡ, ಬಳಿಕ ಡಿಎನ್‌ಎ ಐಸೋಲೇಷನ್ ಮಾಡಿ, ಮಾಲಿಕುಲೇರ್ ತಂತ್ರಜ್ಞಾನದ ಈ ಸಹಾಯದಿಂದ ಅವುಗಳ ತಳಿ ಹಾಗೂ ಲಿಂಗವನ್ನು ಪತ್ತೆ ಮಾಡಲಿದ್ದಾರೆ. ಮೂಲಕ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ತಳಿಯ ರಣಹದ್ದು ಯಾವುದೆಂದು ಮೂರು ವರ್ಷಗಳ ಸಂಶೋಧನೆಯಲ್ಲಿ ಪತ್ತೆ ಹಚ್ಚಬಹುದು. ಇದರ ಡಿಎನ್‌ಎ ಬ್ಯಾಂಕ್‌ ಮುಂಬರುವ ಸಂಶೋಧನೆಗೆ ಸಹಾಯಕವಾಗಲಿದೆ’ ಭಾರತದಲ್ಲಿ ಕಂಡು ಬರುವ 9 ಜಾತಿಯ ರಣಹದ್ದುಗಳ ಪೈಕಿ 3 ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಇತ್ತೀಚಿನ ದಿನಗಳಲ್ಲಿ ಶೇ 95ರಷ್ಟು ಅವುಗಳ ಸಂಖ್ಯೆ ಕಡಿಮೆಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸುವುದು ಇದರ ಇನ್ನೊಂದು ಉದ್ದೇಶ. ಈ ಬಗೆಯ ಸಂಶೋಧನೆ ರಾಜ್ಯದಲ್ಲಿ ನಡೆಯುತ್ತಿರುವುದು ಅಪರೂಪದಲ್ಲಿ ಅಪರೂಪದ್ದಾಗಿದೆ. : ------