ಹಿರಿಯ ನಟ ಶಿವರಾಂ ನಿಧನಕ್ಕೆ ಸಿದ್ಧರಾಮಯ್ಯ, ಹೆಚ್ಡಿಕೆ ಸಂತಾಪ: ಅಂತಿಮ ದರ್ಶನ ಪಡೆದ ನಟ ಶಿವರಾಜ್ ಕುಮಾರ್. ಬೆಂಗಳೂರು,ಡಿಸೆಂಬರ್,4,2021(..):ಕನ್ನಡ ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಮಾಜಿ ಸಿಎಂಗಳಾದ ಸಿದ್ಧರಾಮಯ್ಯ, ಬಿಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಶಿವರಾಂ ಅವರ ನಿಧನದ ಸುದ್ಧಿ ತಿಳಿದು ದಿಗ್ಭ್ರಮೆಯಾಯಿತು. ಚಿತ್ರರಂಗದ ಆಗುಹೋಗುಗಳಿಗೆ ಶಿವರಾಂ ಅವರು ಸ್ಪಂದಿಸುತ್ತಿದ್ದರು. ಅವರ ಅಗಲಿಕೆ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು. ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿ, ಶಿವರಾಂ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಶಿವರಾಂ ನೆನಪು ಸದಾ ನಮ್ಮೊಂದಿಗೆ ಜೀವಂತವಾಗಿರಲಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನ ಕುಟುಂಬಕ್ಕೆ ನೀಡಲಿ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ. ಹಾಗಯೇ ಶಿವರಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಎಸ್ ವೈ, ನಿಧನದ ಸುದ್ಧಿ ಅತೀವ ನೋವು ತಂದಿದೆ. ಕನ್ನಡ ದಿಗ್ಗಜರ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದಿದ್ದಾರೆ. ಅಂತಿಮ ದರ್ಶನ ಪಡೆದ ನಟ ಶಿವರಾಜ್ ಕುಮಾರ್ , ಶ್ರೀನಾಥ್. ಹಿರಿಯ ನಟ ಶಿವರಾಂ ಅವರ ಪಾರ್ಥೀವ ಶರೀರವನ್ನ ತ್ಯಾಗರಾಜನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಟ ಶಿವರಾಜ್ ಕುಮಾರ್ ಶಿವರಾಂ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ನಮ್ಮ ಕುಟುಂಬದ ಬಗ್ಗೆ ಅಭಿಮಾನವಿತ್ತು. ನಮಗೆ ಆತ್ಮೀಯರಾಗುತ್ತಿರುವವರೆಲ್ಲಾ ದೂರವಾಗುತ್ತಿದ್ದಾರೆ. ಶಿವರಾಮಣ್ಣನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ನಟ ಶ್ರೀನಾಥ್ ಅಂತಿಮ ದರ್ಶನ ಪಡೆದ ಮಾತನಾಡಿ, ನನ್ನ ಜೊತೆ 100 ಸಿನಿಮಾಗಳಲ್ಲಿ ಮಾಡಿದ್ದರು.ಶಿವರಾಂ ಎಲ್ಲರನ್ನೂ ಒಂದಾಗಿ ನೋಡುತ್ತಿದ್ದರು. ಅವರು ಅಪಾರ ದೈವಭಕ್ತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು. : - - -- ’-