ಕೇಂದ್ರ ಸಚಿವರನ್ನು ಭೇಟಿ ಮಾಡಿ : ಹಜ್ ಯಾತ್ರೆ ಮತ್ತು ರಾಜ್ಯ ವಕ್ಫ್ ಇಲಾಖೆಯ ಅಭಿವೃದ್ಧಿಗೆ ಮನವಿ ಮಾಡಿದ ಸಚಿವೆ ಜೊಲ್ಲೆ. ನವದೆಹಲಿ ನವೆಂಬರ್‌ 18, 2021 : (.. ) ರಾಜ್ಯ ಹಜ್‌ ಮತ್ತು ವಕ್ಫ್‌ ಇಲಾಖೆಯ ಸಮಸ್ಯೆಗಳ ಪರಿಹಾರದ ಜೊತೆಗೆ ಅಭಿವೃದ್ದಿಗೆ ಅಗತ್ಯ ಸಹಕಾರದ ಭರವಸೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಹಾಗೂ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ನೀಡಿದ್ದಾರೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಗುರುವಾರ ನವದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಹಾಗೂ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ಜಿ ಅವರನ್ನು ಭೇಟಿ ಮಾಡಿ, ಹಜ್ ಯಾತ್ರೆ ಮತ್ತು ರಾಜ್ಯ ವಕ್ಫ್ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಹೀಗಿದೆ.. ಕರೋನಾ ಸಾಂಕ್ರಾಮಿಕದ ಕಾರಣ ಎರಡು ವರ್ಷಗಳ ನಂತರ ಪವಿತ್ರ ಹಜ್‌ ಯಾತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುವಲ್ಲಿ ಕೇಂದ್ರ ಸಚಿವರ ಮುತುರ್ಜಿಗೆ ಅಭಿನಂದನೆ. ರಾಜ್ಯದಲ್ಲಿರುವ 32 ಸಾವಿರಕ್ಕೂ ಹೆಚ್ಚು ವಕ್ಫ್‌ ಸಂಸ್ಥೆಗಳ 46 ಸಾವಿರಕ್ಕೂ ಹೆಚ್ಚು ಆಸ್ತಿಗಳ ರಕ್ಷಣೆಗೆ ಕೇಂದ್ರ ವಕ್ಫ್‌ ಪರಿಷತ್‌ ನಿಂದ ಅನುದಾನ ನೀಡಿದಲ್ಲಿ ಅನುಕೂಲವಾಗುತ್ತದೆ. ಅಲ್ಲದೆ, ಅವುಗಳನ್ನು ಅಭಿವೃದ್ದಿಪಡಿಸಿದಲ್ಲಿ ವಕ್ಫ್‌ ಮಂಡಳಿಗೆ ಅದಾಯವೂ ಸಿಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ವಕ್ಫ್‌ ಪರಿಷತ್ತಿನಲ್ಲಿ ಬಾಕಿ ಇರುವ ರಾಜ್ಯದ ಪ್ರಸ್ತಾವನೆಗಳನ್ನು ತ್ವರಿತವಾಗಿ ಅಂಗೀಕರಿಸಿ ಮಂಜೂರಾತಿ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯದ ವಕ್ಫ್‌ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯ ಪರವಾಗಿ ಸಮರ್ಥವಾಗಿ ವಾದಿಸುವಂತಹ ನ್ಯಾಯವಾದಿಗಳನ್ನು ನೇಮಿಸಲು ಆರ್ಥಿಕ ಸಂಪನ್ಮೂಲದ ಕೊರತೆಯಿದೆ. ಇಂತಹ ಪ್ರಕರಣಗಳ ನಿರ್ವಹಣೆಗೆ ನ್ಯಾಯವಾದಿಗಳ ವೆಚ್ಚವನ್ನು ಕೇಂದ್ರ ವಕ್ಫ್‌ ಪರಿಷತ್ತಿನಿಂದ ಭರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ವಿಷಯಗಳ ಬಗ್ಗೆ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ರಾಜ್ಯದಲ್ಲಿ 2020 ರ ಹಜ್‌ ಯಾತ್ರೆಯ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಹಾಗೂ ವಕ್ಫ್‌ ಆಸ್ತಿಗಳ ಸಂರಕ್ಷಣೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಕೇಂದ್ರ ಸಚಿವರು ಸಂತಸ. ಈ ಸಂಧರ್ಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ ಉಪಸ್ಥಿತರಿದ್ದರು. : --------