ಮಾತನಾಡುವವರು ಮಾತನಾಡಲಿ: 2023ಕ್ಕೆ ಜೆಡಿಎಸ್ ಶಕ್ತಿ ತೋರಿಸುತ್ತೇವೆ-ಸಿದ್ಧರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಪರೋಕ್ಷ ಟಾಂಗ್. ರಾಮನಗರ,ಸೆಪ್ಟಂಬರ್,27,2021(..):ಜೆಡಿಎಸ್ ನಿಂದಲೇ ಬೆಳೆದು ಹೋದವರು ನಮ್ಮ ಪಕ್ಷದ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾರೆ. ಮಾತನಾಡುವವರು ಮಾತನಾಡಲಿ 2023ಕ್ಕೆ ಜೆಡಿಎಸ್ ಶಕ್ತಿ ಏನೇಂಬುದನ್ನ ತೋರಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರೋಕ್ಷ ಟಾಂಗ್ ನೀಡಿದರು. ಬಿಡದಿ ಫಾರ್ಮ್ ಹೌಸ್ ನಲ್ಲಿ ಆರಂಭವಾದ 4 ದಿನಗಳ ‘ಜನತಾ ಪರ್ವ 1.’ ಕಾರ್ಯಗಾರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇರುವುದು ಒಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಎನ್ನುವ ಘೋಷವಾಕ್ಯ ಹಾಗೂ 2023ಕ್ಕೇ ಜೆಡಿಎಸ್ ಎನ್ನುವ ಗುರಿಯೊಂದಿಗೆ ಆರಂಭವಾದ ಕಾರ್ಯಾಗಾರವೂ ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ವಿಶೇಷ. ಪಕ್ಷದ ಗುರಿ ಮತ್ತು ದಾರಿಯ ಬಗ್ಗೆ ಸ್ಪಷ್ಟತೆ ಮೂಡಿಸುವುದರ ಜತೆಗೆ, ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳಿಗೆ ನಿರ್ದಿಷ್ಟ ಗುರಿಗಳನ್ನು ನಿಗದಿ ಮಾಡಲಾಗುವುದು. ಅದಕ್ಕೆ ಅಗತ್ಯವಾದ ತರಬೇತಿಯನ್ನು ಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಮಿಷನ್ 123 ಎಂಬ ಗುರಿಯೊಂದಿಗೆ ನಾವು ತಯಾರಿ ಆರಂಭ ಮಾಡಿದ್ದೇವೆ. ಈ ಗುರಿ ತಲುಪಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಸಮರ್ಥರಾದ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸುತ್ತೇವೆ. ನಮ್ಮನ್ನು ಹಗುರವಾಗಿ ಕಾಣುವ ಕೆಲವರಿಗೆ ತಕ್ಕ ಉತ್ತರ ನೀಡುತ್ತೇವೆ. 30 ಸೀಟುಗಳ ಪಕ್ಷ ಎಂದು ಜೆಡಿಎಸ್ ಪಕ್ಷವನ್ನು ಲಘುವಾಗಿ ಪರಿಗಣಿಸುವವರಿಗೆ ಮುಂದೆ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಗುಡುಗಿದರು. : - -