ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿಕೆಗೆ ಅದ್ಧೂರಿ ಸ್ವಾಗತ. ಬೆಂಗಳೂರು, ಜೂನ್ 14, 2024 (..):ಕೇಂದ್ರದ ಎನ್​ಡಿಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಂದ ಹೆಚ್​ಡಿ ಕುಮಾರಸ್ವಾಮಿ ಇಂದು ಬೆಂಗಳೂರಿಗೆ ಆಗಮಿಸಿದರು. ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಸಂಸದ ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಸ್ವಾಗತಿಸಿದರು. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಸೇಬಿನಹಣ್ಣು, ಮೂಸಂಬಿ ಹಾರ ಹಾಕಿ ಸ್ವಾಗತ ಕೋರಿದರು. ಬಳಿಕ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪ್ರಧಾನಿ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕೇಂದ್ರ ಸಚಿವನಾದ ಬಳಿಕ ನನ್ನ ಕರ್ಮ ಭೂಮಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷವಾಗಿ ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ಎಂದರು. ಇನ್ನು ಜೆಡಿಎಸ್ ಮುಗಿಸಿದ್ದೇವೆ ಎಂದು ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ ಎಂದರು. : , , ,