ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ವಿಸ್ತೃತ ಚರ್ಚೆ ನಡೆಸಿ ನಂತರ ಅನುಷ್ಟಾನದ ಬಗ್ಗೆ ನಿರ್ಧರಿಸಿ- ಸರ್ಕಾರಕ್ಕೆ ಸಿದ್ಧರಾಮಯ್ಯ ಆಗ್ರಹ. ಬೆಂಗಳೂರು,ಆಗಸ್ಟ್.8,2021(..):ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕುರಿತಾದ ಆದೇಶವನ್ನು ಈ ಕ್ಷಣವೇ ಹಿಂಪಡೆದು ವಿಸ್ತೃತ ಚರ್ಚೆ ನಡೆಸಿದ ನಂತರ ಅನುಷ್ಠಾನಗೊಳಿಸುವ ಕುರಿತು ತೀರ್ಮಾನಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು, ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಾಡಿನ ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯದ ಮೇಲೆ ಹೇರಬೇಡಿ, ಸಂಬಂಧಿಸಿದ ವಲಯಗಳ ಜನರ ಜೊತೆಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು. ಹಾಗೆ ಮಾಡದೆ ಈ ಅನಾಹುತಕಾರಿ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ; ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಸಿದ್ಧರಾಮಯ್ಯ ಟೀಕಿಸಿದ್ದಾರೆ. ಈ ಆದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ಬು ಸಿದ್ದರಾಮಯ್ಯ ಅವರು ಗುರುತಿಸಿದ್ದಾರೆ. ಆದರೆ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೊ ಇಲ್ಲ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೊ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿ ವಿ ಗಳಲ್ಲಿರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೊ ಎಂಬುದರ ಬಗ್ಗೆ ಸರ್ಕಾರದ ಆದೇಶ ಮೌನವಾಗಿದೆ. ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಶೇ. 40 ರಷ್ಟು ಕ್ರೆಡಿಟ್ಟುಗಳನ್ನು/ ಅಂಕಗಳನ್ನು/ ಆನ್ ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಯಾವುದೇ ವಿಶ್ವವಿದ್ಯಾಲಯದಿಂದ ಶೇ 50 ರಷ್ಟು ಅಂಕ /ಕ್ರೆಡಿಟ್ಟುಗಳನ್ನು‌ ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. (ಈಗಾಗಲೆ ಉಪನ್ಯಾಸಕರುಗಳಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿದೆ). ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ, ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ- ರಾಜ್ಯ ಬಿಜೆಪಿಗಳು ಹೊರಟಿವೆ. ಗುಣಮಟ್ಟದ ಪ್ರಾಧ್ಯಾಪಕರುಗಳನ್ನು ಮತ್ತು ಅತ್ಯಂತ ಪ್ರಾಯೋಗಿಕವಾದ ಹಾಗೂ ಬದುಕಿಗೆ ಹತ್ತಿರವಾದ “ಪೆಡಗಾಗಿ (ಕಲಿಕೆ ಮತ್ತು ಬೋಧನಾ ವಿಧಾನ) ಗಳ‌ ಮೂಲಕ ಶಿಕ್ಷಣ ಕೊಡುವುದರ ಕಡೆಗೆ ಯೋಚಿಸುವುದರ ಬದಲಾಗಿ‌ ವಿ ವಿಗಳನ್ನು ಸರ್ಟಿಫಿಕೇಟ್ ನೀಡುವ ಅಂಗಡಿಗಳನ್ನು ಮಾಡಲಾಗುತ್ತಿದೆ. ಬಿಜೆಪಿಯು ಉನ್ನತ ಶಿಕ್ಷಣವನ್ನು‌ ಸರಿಪಡಿಸುವ ನೆಪದಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ. ಖಾಸಗಿ ಬಂಡವಾಳಿಗರು ಶಿಕ್ಷಣದ ದಿಕ್ಕು ದೆಸೆಗಳನ್ನು ನಿರ್ಧರಿಸುವ ಹೊಲಸು ಕ್ರಮವನ್ನು ಪರಿಚಯಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಜನವಿರೋಧಿ ಕ್ರಮ. ದೇಶದ್ರೋಹವೆಂದರೆ ಜನದ್ರೋಹವೆ ಎಂದು ಅರಿತುಕೊಳ್ಳಬೇಕು. ಜಗತ್ತಿನ ಅನೇಕ ಪ್ರಮುಖ ಇತಿಹಾಸಕಾರರು ಶುದ್ಧ ವಿಜ್ಞಾನದ ( ಜೆನೆಟಿಕ್ಸ್ ಮುಂತಾದ) ವಿಷಯಗಳ ಮೂಲಕ‌ ತಮ್ಮ ವಿಷಯಗಳನ್ನು ಮಂಡಿಸುತ್ತಿದ್ದಾರೆ.‌ ನಮ್ಮ ವಿದ್ಯಾರ್ಥಿಗಳೂ ಆ ಎಲ್ಲ ವಿಷಯಗಳನ್ನು ಕಲಿಯಬೇಕಲ್ಲವೆ? ಆದರೆ ಒಂದು ಮೇಜರ್ ಸಬ್ಜೆಕ್ಟ್ ಎಂದು ಮಾಡಿ ಮಕ್ಕಳನ್ನು ಕೂಪ ಮಂಡೂಕಗಳನ್ನಾಗಿಸಲು ಹೊರಟಿದ್ದಾರೆ. ಉನ್ನತ ಶಿಕ್ಷಣ ಕುಸಿದು ಬಿದ್ದರೆ ರಾಷ್ಟ್ರವೂ ಕುಸಿದು ಬೀಳುತ್ತದೆ. ಜೊತೆಗೆ 21 ನೆ ಶತಮಾನ ಬಹುಶಿಸ್ತುಗಳ ಯುಗ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಅಜ್ಞಾನವನ್ನು ಆರಾಧಿಸುವ ಮೂರ್ಖರ ಮಾತು ಕೇಳಿ ರಾಜ್ಯ ಮತ್ತು ರಾಷ್ಟ್ರಗಳ ಶಿಕ್ಷಣವನ್ನು ಕೊಲ್ಲಬಾರದೆಂದು ಒತ್ತಾಯಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಇವು ಮೇಲ್ನೋಟಕ್ಕೆ ತಕ್ಷಣಕ್ಕೆ‌ ನನಗೆ ಕಂಡ ಅನಾಹುತಕಾರಿ ಅಂಶಗಳು. ಆಳದಲ್ಲಿ ಇನ್ನೂ ಭೀಕರ ಹುನ್ನಾರಗಳಿವೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. :