ಇಂದು ಕೊರೊನಾ ಮುನ್ನೆಚ್ಚರಿಕೆ ನಡುವೆ ಟೋಕಿಯೋ ಒಲಿಂಪಿಕ್ಸ್’ಗೆ ಚಾಲನೆ ಬೆಂಗಳೂರು, ಜುಲೈ 23, 2021 (..):ಇಂದು ಟೋಕಿಯೋ ಒಲಿಂಪಿಕ್ಸ್ ಜಪಾನ್‌ನ ಟೋಕಿಯೋ ನಗರದಲ್ಲಿ ಉದ್ಘಾಟನೆಯಾಗಲಿದೆ. ಕೊರೊನಾವೈರಸ್‌ನ ಭೀತಿಯಿಂದಾಗಿ ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಲವೇ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವೈರಸ್‌ನಿಂದ ದೂರವಿರಲು ಉದ್ಘಾಟನಾ ಸಮಾರಂಭಕ್ಕೆ ಕಡಿಮೆ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ಕಳುಹಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಮರುದಿನ ಸ್ಪರ್ಧಾಕಣಕ್ಕೆ ಇಳಿಯಲಿರುವ ಕ್ರೀಡಾಪಟುಗಳು ಈ ಸಮಾರಂಭದಿಂದ ಹೊರಗುಳಿಯಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ ಎಂದು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ನ ಸೆಕ್ರೇಟರಿ ಜನರಲ್ ರಾಜೀವ್ ಮೆಹ್ತಾ ಹೇಳಿದ್ದಾರೆ. ಉದ್ಘಾಟನಾ ಸಮಾರಂಭದ ಮರುದಿನ ಬಾಕ್ಸರ್‌ಗಳು, ಆರ್ಚರ್‌ಗಳು ಮತ್ತು ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡ ಕೂಡ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ.