ಕನ್ನಡದ ಸುದ್ದಿವಾಹಿನಿಗೆ ‘ಪಬ್ಲಿಕ್’ ಆಗಿ ವಾರ್ನ್ ಮಾಡಿದ ರಕ್ಷಿತ್ ಶೆಟ್ಟಿ! ಜುಲೈ 11ಕ್ಕೆ ಕಾದಿರುವ ಅಭಿಮಾನಿಗಳು !! ಮೈಸೂರು, ಜುಲೈ 03, 2021 (..):ಕನ್ನಡದ ಒಂದು ನ್ಯೂಸ್​ ಚಾನೆಲ್​ ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಈ ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು. ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು, ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯುಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ’ ಎಂದು ರಕ್ಷಿತ್​ ಬೇಸರ ಹೊರ ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು ಈ ಎಲ್ಲದ್ದಕ್ಕೆ ಜುಲೈ 11ರಂದು ತಕ್ಕ ಉತ್ತರ ನೀಡುವುದಾಗಿ ಹೇಳಿ ಕುತೂಹಲ ಮೂಡಿಸಿದ್ದಾರೆ. ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಬರೆದ ಸಾಲುಗಳಿವು… ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇದ್ದಾರೆ. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೀನಿ, ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೀನಿ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್​ ಆಫೀಸರ್​ ಇಂದ ಹಿಡಿದು, ತಾಂತ್ರಿಕ ವರ್ಗ, ನಿರ್ದೇಶಕರು ಹಾಗೂ ಪ್ರತಿಯೊಬ್ಬ ನಿರ್ಮಾಪಕರು ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಾಗಂತ ನಿಜ ಸುಳ್ಳಾಗುವುದಿಲ್ಲ’ ಎಂದಿದ್ದಾರೆ. ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ, ಆದರೆ ಹತ್ತು ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ. ನನ್ನ ಉತ್ತರ ಜುಲೈ 11ರಂದು ಕಾದು ನೋಡಿ. . ನನ್ನ ಎಲ್ಲಾ ಏಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ, ಅಭಿಮಾನಿ ಬಳಗಕ್ಕೂ ಚಿರಋಣಿ’ ಎಂದು ರಕ್ಷಿತ್​ ಪತ್ರ ಅಂತ್ಯಗೊಳಿಸಿದ್ದಾರೆ.