ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಮಾರ್ಗಸೂಚಿ..! ಆರು ತಿಂಗಳಲ್ಲಿ ಜಾರಿಗೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಗಳಿಗೆ ಆದೇಶ… ಬೆಂಗಳೂರು,ಮೇ,11,2021(..):ಕ್ರಿಮಿನಲ್ ಅಪರಾಧ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಆರು ತಿಂಗಳಲ್ಲಿ ಜಾರಿಗೊಳಿಸುವಂತೆ ಎಲ್ಲ ಹೈಕೋರ್ಟ್ ಗಳಿಗೆ ಆದೇಶಿಸಿದೆ. ಸದ್ಯದ ಅಪರಾಧ ಪ್ರಕರಣಗಳ ನ್ಯಾಯದಾನ ವ್ಯವಸ್ಥೆಯಲ್ಲಿನ ನೂನ್ಯತೆಗಳನ್ನು ಸರಿಪಡಿಸುವ ಹೊಸ ಮಾರ್ಗಸೂಚಿಯ ಜಾರಿಗೆ ಎಲ್ಲ ಹೈಕೋರ್ಟ್ ಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯಪಡೆದುಕೊಳ್ಳಬೇಕು ಮತ್ತು ಅವುಗಳ ಸಮನ್ವಯದಿಂದ ಪೊಲೀಸ್ ಕಾಯಿದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಆದಷ್ಟು ಶೀಘ್ರ ಜಾರಿಗೆ ಕ್ರಮ ವಹಿಸಬೇಕೆಂದು ಸುಪ್ರೀಂ ನಿರ್ದೇಶನ ನೀಡಿದೆ. ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಳಲ್ಲಿ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಸ್ವಯಂ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಿಂದಿನ ಸಿಜೆಐ ಎಸ್.ಎ ಬೋಬ್ಡೆ, ಎಲ್.ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ತ್ರಿಸದಸ್ಯಪೀಠ ಈ ಮಹತ್ವದ ಆದೇಶ ಮಾಡಿದೆ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು ಸುಪ್ರೀಂಕೋರ್ಟ್ ನ ಹೆಸರಾಂತ ವಕೀಲರಾದ ಆರ್. ಬಸಂತ್, ಸಿಧಾಯ್ ಲೂತ್ರಾ ಮತ್ತು ಕೆ.ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿಗಳನ್ನಾಗಿ ನೇಮಕ ಮಾಡಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ಅವರು ಸಾಕಷ್ಟು ಅಧ್ಯಯನ ನಡೆಸಿ ತಮ್ಮ ಅನುಭವ ಧಾರೆ ಎರೆದು ಮಾರ್ಗಸೂಚಿ ಸಿದ್ಧಪಡಿಸಿದ್ದರು. ಆ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಗಳ ಅಭಿಪ್ರಾಯಗಳನ್ನೂ ಪಡೆದ ನಂತರ ಮಾರ್ಗಸೂಚಿ ಅಂತಿಮಗೊಳಿಸಿದೆ. ಸಿಜೆಐ ಆಗಿದ್ದ ಬೊಬ್ಡೆ ಅವರು ನಿವೃತ್ತಿಗೂ ಮುನ್ನ ಈ ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ. ಅವುಗಳ ಪ್ರಮುಖಾಂಶಗಳು ಹೀಗಿವೆ. ಜಾಮೀನು ಅರ್ಜಿ ತ್ವರಿತ ವಿಲೇವಾರಿ ಸುಪ್ರೀಂಕೋರ್ಟ್ ಸೂಚಿಸಿರುವ ಮಾರ್ಗಸೂಚಿಯಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಅದರಂತೆ ಜಾಮೀನು ಅರ್ಜಿ ಮೊದಲು ವಿಚಾರಣೆಗೆ ಬಂದ ದಿನಾಂಕದಿಂದ 3 ರಿಂದ 7 ದಿನಗಳ ಅವಧಿಯಲ್ಲಿ ಅದನ್ನು ಇತ್ಯರ್ಥಗೊಳಿಸಬೇಕು. ಒಂದು ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅದನ್ನು ಆ ಅವಧಿಯಲ್ಲಿ ವಿಲೇವಾರಿ ಮಾಡದಿದ್ದರೆ ಅದಕ್ಕೆ ಕಾರಣಗಳನ್ನು ನೀಡಬೇಕು. ಕೃಪೆ.. ಶ್ರೀಕಾಂತ್ ಹುಣಸವಾಡಿ ವಿಜಯ ಕರ್ನಾಟಕ.. : - – -