ಕಾಲರಾ , ಪ್ಲೇಗ್ ದಾಳಿಯಿಂದ ರಕ್ಷಿಸಿದ ‘ವ್ಲಾಡಿಮೀರ್ ಹಾಫ್ಕಿನ್’ ಜನ್ಮದಿನ : ಶುಭಕೋರಿದ ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು,ಮಾರ್ಚ್,16,2021(..):120 ವರ್ಷಗಳ ಹಿಂದೆ ಕಾಲರಾ, ಪ್ಲೇಗ್ ಗಳಿಂದ ಭಾರತೀಯರನ್ನು ಕಾಪಾಡಿದ ವ್ಲಾಡಿಮೀರ್ ಹಾಫ್ಕಿನ್ ಜನ್ಮದಿನ ಇಂದು. ಇಂತಹ ವಿಜ್ಞಾನಿಗಳ ಸೇವೆಯನ್ನು ನಾವಾಗಲಿ, ನಾವೇ ಆರಿಸಿದ ಈಗಿನ ನಮ್ಮ ಜನಸೇವಕರಾಗಲಿ ನೆನಪಿಸಿಕೊಳ್ಳುತ್ತಿದ್ದೇವೆಯೆ..? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ವ್ಲಾಡಿಮೀರ್ ಹಾಫ್ಕಿನ್ ಜನ್ಮದಿನಕ್ಕೆ ಶುಭಕೋರಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಂದು ಜಗತ್ತು ಕೊರೋನಾ ವೈರಸ್ ದಾಳಿಯ ಭಯದಲ್ಲಿರುವಂತೆ ಈ ಹಿಂದೆಯೂ ಕಾಲರಾ, ಪ್ಲೇಗ್ ದಾಳಿಗೆ ತುತ್ತಾಗಿತ್ತು. ಇಂತಹ ಸಂದರ್ಭದಲ್ಲಿ ಜೀವ ಭಯ ತೊರೆದು ದುಡಿದ ವೈದ್ಯ ವಿಜ್ಞಾನಿಗಳಲ್ಲಿ ರಷ್ಯಾದ ವ್ಲಾಡಿಮೀರ್ ಹಾಫ್ಕಿನ್ ಪ್ರಮುಖರು ಎಂದು ಹೇಳಿದ್ದಾರೆ ಪ್ಯಾರಿಸ್-ಜಿನೇವಾಗಳಲ್ಲಿಯೂ ಕಾರ್ಯ ನಿರ್ವಹಿಸಿದ ಅವರು ಯೂರೋಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಕಂಡು ಹಿಡಿಯಲು ಆಸಕ್ತಿ ವಹಿಸಿದ್ದರು. 1892ರಲ್ಲಿ ತಾವು ಅನ್ವೇಷಿಸಿದ ಕಾಲರಾ ಲಸಿಕೆಯನ್ನು ಪರೀಕ್ಷಿಸಲಿಕ್ಕಾಗಿ ಮೊದಲ ಬಾರಿ ತಮ್ಮ ದೇಹಕ್ಕೆ ಚುಚ್ಚಿಕೊಂಡಿದ್ದ ಮಹಾನುಭಾವರು ಇವರು. ಅದೇ ಸಂಧರ್ಭದಲ್ಲಿ ಭಾರತದಲ್ಲಿ ಕಾಲರಾ ಮರಣ ಮೃದಂಗ ಬಾರಿಸುತ್ತಿತ್ತು. ಬ್ರಿಟೀಷ್ ವೈಸ್ ರಾಯ್ ಫ್ರೆಡೆರಿಕ್ ಹ್ಯಾಮಿಲ್ಟನ್ ಮೂಲಕ ಭಾರತಕ್ಕೆ ಆಗಮಿಸಿದ ಅವರು ಸುಮಾರು 45000 ಜನರಿಗೆ ಕಾಲರಾ ಚುಚ್ಚುಮದ್ದು ನೀಡಿ ಶೆ.70ರಷ್ಟು ಸಾವು ನೋವು ತಪ್ಪಿಸಿ ಭಾರತೀಯರ ಪಾಲಿಗೆ ಆಪದ್ಬಾಂಧವರಾಗಿದ್ದರು ಎಂದು ವ್ಲಾಡಿಮೀರ್ ಹಾಫ್ಕಿನ್ ಸೇವೆಯನ್ನ ಹೆಚ್.ಡಿ ಕುಮಾರಸ್ವಾಮಿ ಸ್ಮರಿಸಿದ್ದಾರೆ. ಮಹಾರಾಷ್ಟ್ರದ ಬೈಕುಲಾದಲ್ಲಿ ಪ್ರಯೋಗಾಲಯ ತೆರೆದು ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದರು. 1902-03ರ ಸುಮಾರಿನಲ್ಲಿ ಪ್ಲೇಗ್ ಮಾರಿ ಭಾರತವನ್ನು ಕಾಡಿದಾಗ ಸುಮಾರು 5,00,000 ಮಂದಿಗೆ ಇವರು ಕಂಡು ಹಿಡಿದ ಲಸಿಕೆ ಜೀವದಾನ ಮಾಡಿತು. ಇಂದಿಗೂ ಇಂತಹ ಅನೇಕ ಮಹನೀಯರ ಋಣದಲ್ಲಿ ನಾವಿದ್ದೇವೆ. ಆದರೆ ಇಂತಹ ವಿಜ್ಞಾನಿಗಳ ಸೇವೆಯನ್ನು ನಾವಾಗಲಿ, ನಾವೇ ಆರಿಸಿದ ಈಗಿನ ನಮ್ಮ ಜನಸೇವಕರಾಗಲಿ ನೆನಪಿಸಿಕೊಳ್ಳುತ್ತಿದ್ದೇವೆಯೆ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಹಣದಲ್ಲಿ ಜಾತಿಗೊಬ್ಬ ನಾಯಕರ ಜಯಂತಿ ಆಚರಿಸುವ, ನಮ್ಮ ಮತ-ನಮ್ಮ ದೇವರು ಮೇಲು, ನಿಮ್ಮ ಮತ-ನಿಮ್ಮ ದೇವರು ಕೀಳು ಎಂದು ಬೇಧ-ಭಾವ ಮಾಡುತ್ತಾ ಯುದ್ದೋನ್ಮಾದದಲ್ಲಿ ತೇಲುತ್ತಿರುವ ನಮಗೆ. ಕಾಲರಾ, ಪ್ಲೇಗ್, ಕೊರೋನಾ ಮೊದಲಾದ ದೊಡ್ಡ ರೋಗಗಳು ಮೆತ್ತಿಕೊಂಡಾಗ ನೆರವಿಗೆ ಬರುವುದು ಇಂತಹ ನಿಸ್ವಾರ್ಥ ವಿಶ್ವಮಾನವರು ತಮ್ಮ ಜೀವವನ್ನು ಪಣಕ್ಕಿಟ್ಟು ಕಂಡು ಹಿಡಿದ ಲಸಿಕೆಗಳು ಮಾತ್ರ ನಮ್ಮ ಮುತ್ತಾತಂದಿರನ್ನು ಕಾಲರಾ -ಪ್ಲೇಗ್ ದಾಳಿಯಿಂದ ರಕ್ಷಿಸಿ ಇಂದು ನಮ್ಮ ಇರುವಿಕೆಗೆ ಕಾರಣರಾಗಿರುವ ಹಾಫ್ಕಿನ್ ರವರಿಗೆ ಜನ್ಮದಿನದ ಶುಭಾಶಯಗಳು. ನಮ್ಮ ನಾಯಕರುಗಳಿಗೆ ಇವರ ಸೇವೆ ಆದರ್ಶವಾಗಲಿ ಎಂದು ಹೆಚ್.ಡಿಕೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. : ’- – - .