ಕಾಂಗ್ರೆಸ್ ಸೇರಲು ತೀರ್ಮಾನ: ಸಿದ್ಧರಾಮಯ್ಯ ಭೇಟಿ ಬಳಿಕ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು ಹೀಗೆ…. ಬೆಂಗಳೂರು,ಮಾರ್ಚ್,11,2021(..) :ಇವತ್ತು ಮನಸಾರೆ ಕಾಂಗ್ರೆಸ್ ‌ಗೆ ಹೋಗಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನು ಹೇಗೆ ಉಪಯೋಗಿಸಿಕೊಳ್ಳುತ್ತೊ ಹಾಗೇ ಕೆಲಸ ಮಾಡುತ್ತೇನೆ. ಚುನಾವಣೆ ಅನ್ನೋದು ಪರೀಕ್ಷೆಯ ಹಾಗೇ, ಇಬ್ಬರೇ ಅಲ್ಲಿ ಪಾಸಾಗೋದು. ಆದರೆ, ನಾಯಕತ್ವ ಎಂದೂ ಸೋಲುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಮಾಜಿ ಸಿಎಂ ದಿ.ಬಂಗಾರಪ್ಪ ಅವರ ಪುತ್ರ ಮಧುಬಂಗಾರಪ್ಪ ಅವರು ಮುಂಬರುವ ಏಪ್ರಿಲ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದು, ಈ ಹಿನ್ನೆಲೆ ಇಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಅವರು ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಸೊರಬ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದಾರೆ. ಸಿದ್ದರಾಮಯ್ಯ ಹಿರಿಯರು, ಅವರು ಮುಖ್ಯಮಂತ್ರಿ ಆಗಿದ್ದವರು. ನಮ್ಮ ತಂದೆನೂ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ,ಅವರನ್ನು ಭೇಟಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡುತ್ತೇನೆ. ನಾನು ಜೆಡಿಎಸ್‌ ನಲ್ಲಿ ಯಾವತ್ತೂ ಅಧಿಕಾರ ಅನುಭವಿಸಿಲ್ಲ. ಕಾಂಗ್ರೆಸ್‌ ನಲ್ಲಿ ಬೆಳೆಯಲು ಅವಕಾಶ ಇದೆ. ಅದಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. : --