ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪವೇ ನಿರ್ಮಾಣ ಮಾಡಲು ಮಾಸ್ಟರ್ ಪ್ಲಾನ್‍… ಬೆಂಗಳೂರು,ಮಾರ್ಚ್,6,2021(..):ವಿಶ್ವವಿಖ್ಯಾತ ನಂದಿ ಬೆಟ್ಟ ಹತ್ತಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೋಪ್‍ ವೇ ನಿರ್ಮಾಣ ಮಾಡಲು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ರವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು. ಐಡೇಕ್ ಸಂಸ್ಥೆಯು ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಾಣ ಮಾಡುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರಚುರಪಡಿಸಿತು. 2.90 ಕಿ.ಮೀ ಎತ್ತರವಿರುವ ನಂದಿ ಗಿರಿಧಾಮಕ್ಕೆ ರೋಪ್‍ ವೇ ನಿರ್ಮಿಸಲಾಗುವುದು. ನಂದಿ ಬೆಟ್ಟದ ಕೆಳಗಡೆ ಅಂದಾಜು 25 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ಫುಡ್‍ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು, ವೈನ್‍ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿಗರಿಗೆ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು. ಭಾರತೀಯ ತಂತ್ರಜ್ಞಾನವನ್ನು ಬಳಸಿ ರೋಪ್‍ ವೇ ನಿರ್ಮಾಣ ಮಾಡಿದರೆ ಅಂದಾಜು ರೂ.80.00 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಯೂರೋಪಿಯನ್ ತಂತ್ರಜ್ಞಾನವನ್ನು ಬಳಸಿ ರೋಪ್‍ವೇ ನಿರ್ಮಾಣ ಮಾಡಿದರೆ ಅಂದಾಜು ರೂ.182.00 ರಿಂದ ರೂ.240.00 ಕೋಟಿ ವೆಚ್ಚವಾಗಲಿದೆ. ಒಮ್ಮೆಗೆ 10 ಜನ ಪ್ರಯಾಣಿಕರು ಕೇಬಲ್ ಕಾರಿನಲ್ಲಿ ತಲುಪಬಹುದು. ಕೇಂದ್ರ ಜಲಸಾರಿಗೆ ಇಲಾಖೆಯು ಶೇ.20ರಷ್ಟು ಹಣವನ್ನು ಈ ರೋಪ್‍ವೇ ಯೋಜನೆಗೆ ಹಣ ನೀಡಲಿದೆ. ಈ ಯೋಜನೆಯು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸರಹದ್ದಿನಲ್ಲಿ ಬರಲಿದ್ದು, ಎರಡು ಜಿಲ್ಲೆಗಳ ಕಂದಾಯ ಅಧಿಕಾರಿಗಳಿಗೆ ಅಗತ್ಯ ಜಮೀನನ್ನು ಸ್ವಾಧಿನಪಡಿಸಿಕೊಂಡು ನೀಡುವಂತೆ ಸಚಿವರು ನಿರ್ದೇಶಿಸಿದರು. ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಕಳೆದ 30 ವರ್ಷಗಳಿಂದ ನಂದಿ ಬೆಟ್ಟಕ್ಕೆ ರೋಪ್‍ ವೇ ನಿರ್ಮಿಸುವ ಬಗ್ಗೆ ಮಾತನಾಡಲಾಗುತ್ತಿದೆ. ದಿ.ಖ್ಯಾತ ನಟ ಶಂಕರನಾಗರವರು ಮೂರು ದಶಕಗಳ ಹಿಂದೆಯೇ ಈ ಯೋಜನೆಯ ಕನಸು ಕಂಡಿದ್ದರು. ಇದೀಗ ಕಾಲ ಕೂಡಿಬಂದಿದ್ದು, ಮುಂದಿನ ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್‍ ವೇ ನಿರ್ಮಿಸಲಾಗುವುದು. ದೇಶದ ಇತರ ರಾಜ್ಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೋಪ್‍ ವೇ ಗಳನ್ನು ನಿರ್ಮಾಣ ಮಾಡಲಾಗಿದೆ. ಯಾವುದಾದರು ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ನಂದಿ ಗಿರಿಧಾಮ ಯೋಜನೆಯನ್ನು ನೀಡಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ್ ಇದೇ ವೇಳೆ ಹೇಳಿದರು. ಎರಡನೇ ಹಂತದಲ್ಲಿ ನಂದಿ ಬೆಟ್ಟ ಹಾಗೂ ಸ್ಕಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರೋಪ್‍ವೇ ನಿರ್ಮಾಣ ಮಾಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಿವಗಂಗೆ, ಮಧುಗಿರಿಯ ಏಕಶಿಲಾ ಬೆಟ್ಟ ಹಾಗೂ ಗುಂಡಿಬಂಡೆಯ ಆವಲಬೆಟ್ಟಗಳಿಗೆ ರೋಪ್‍ವೇ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ಸಚಿವ ಸಿ.ಪಿ ಯೋಗೇಶ್ವರ್ ನಿರ್ದೇಶಿಸಿದರು. ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೇ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇ‍ಶಕರಾದ ವಿಜಯ ಶರ್ಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಮತ್ತು ಮೆ|| ಐಡೆಕ್ ಸಂಸ್ಥೆಯ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ತಹಸೀಲ್ದಾರಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. : – - – - -