ಇಲಾಖೆಯಲ್ಲಿ ಮತ್ತೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ…. ಬೆಂಗಳೂರು,ಫೆಬ್ರವರಿ,20,2021(..):ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಇಲಾಖೆಯಲ್ಲಿ ಹೊಸ ಹೊಸ ಸುಧಾರಣೆಗಳನ್ನು ಜಾರಿ ಮಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಇದೀಗ ಸಾವಿರಾರು ಜನರಿಗೆ ಆಶ್ರಯ ಒದಗಿಸುವ ಗ್ರಾನೈಟ್ ಕಲ್ಲು ಗಣಿಗುತ್ತಿಗೆಯನ್ನು ಹರಾಜು ರಹಿತ ನೀಡಿ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ಸತತ ಪರಿಶ್ರಮದ ಫಲವಾಗಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲ್ಲು ಗಣಿಗುತ್ತಿಗೆಗೆ ಕೊನೆಗೂ ಚಾಲನೆ ಸಿಕ್ಕಿದೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಮದ್ದಕ್ಕನಹಳ್ಳಿ ಗ್ರಾಮದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ( ಸರ್ವೆ ನಂ.12 12.20 ಎಕರೆ ) ಪ್ರದೇಶದಲ್ಲಿ ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದ್ದು,ಅವರ ಕುಟುಂಬಕ್ಕೂ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಆಶ್ರಯ ಸಿಗಲಿದೆ. ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು) ಪರಿಗಣಿಸಿ ಹರಾಜು ರಹಿತವಾಗಿ ಮಂಜೂರಾತಿ ಮಾಡಲು ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೊಂದಣಿ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಈ ಸಂಘಕ್ಕೆ ಮಾನವೀಯತೆಯ ದೃಷ್ಟಿಯಿಂದ ಹರಾಜುರಹಿತವಾಗಿ ಮಂಜೂರು ಮಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜನಸ್ನೇಹಿ ಎಂಬುದನ್ನು ಸಚಿವ ಮುರುಗೇಶ್ ನಿರಾಣಿ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಜೆಡ್ಡುಗಟ್ಟಿರುವ ವ್ಯವಸ್ಥೆಗೆ ಮುಕ್ತಿ ಹಾಡಲು ಮುಂದಾಗಿರುವ ನಿರಾಣಿ ಅವರು, ಈ ಹಿಂದೆ ಇದೇ ಇಲಾಖೆಯ ಸಚಿವರುಗಳು ನಿರ್ಲಕ್ಷ್ಯ ಮಾಡಿದ್ದ ಕಡತಗಳನ್ನು ವಿಲೇವಾರಿ ಮಾಡಿ ಇಲಾಖೆಯನ್ನು ಜನಾನುರಾಗಿ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಿರ್ಲಕ್ಷ್ಯ ಮಾಡಿದ್ದ ಹಿಂದಿನ ಸಚಿವರು ವಾಸ್ತವವಾಗಿ ಇದು ಎಂದೋ ಆಗಬೇಕಾಗಿದ್ದ ಕೆಲಸವಾಗಿತ್ತು. ಆದರೆ, ಈ ಹಿಂದೆ ಇದೇ ಇಲಾಖೆಯ ಸಚಿವರಾಗಿದ್ದ ಕೆಲವರು ಉದಾಸೀನ ತೋರಿದ್ದರಿಂದ ನೆನೆಗುದಿದೆ ಬಿದ್ದಿತ್ತು. ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನೆನೆಗುದಿಗೆ ಬಿದ್ದಿತ್ತು. ಇದರ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿದ ಸಚಿವ ಮುರುಗೇಶ್ ನಿರಾಣಿ, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆಗೆ ಚರ್ಚೆಸಿ ಇದಕ್ಕೊಂದು ಪರಿಹಾರ ಒದಗಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಪರಿಣಾಮ ಇಂದು ಕಾರ್ಯರೂಪಕ್ಕೆ ಬಂದಿದೆ. ಸಂಘಕ್ಕೆ 1995 ರಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿ, ಪುನಃ 20 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಇದಾದಬಳಿಕ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ನಿಯಮದಂತೆ ನಾಲ್ಕು ತಿಂಗಳ ಅವಧಿಯೊಳಗೆ ನೋಂದಣಿ ಮಾಡಿಸಿ ಕೊಂಡಿರಲಿಲ್ಲ. ಈ ಕಾರಣದಿಂದಾಗಿ ಉಪನೋಂದಣಾಧಿಕಾರಿಗಳು 29.12.2015 ರಂದು ನೊಂದಣಿ ಮಾಡಲು ಅವಕಾಶವಿಲ್ಲವೆಂದು ಹೇಳಿದ್ದರು. ಬಳಿಕ ನೋಂದಣಿ ಮಾಡಿಸಿಕೊಳ್ಳಲು ಸಂಘವು29.12.2015 ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಘದ ಈ ಪ್ರಸ್ತಾವನೆಯ ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ ಸಲ್ಲಿಸಲಾಗಿತ್ತು. ನಂತರ ಕಾನೂನು ಇಲಾಖೆಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿ,ಈ ಗಣಿ ಗುತ್ತಿಗೆಯನ್ನು ಸದರಿ ಸಂಘಕ್ಕೆನೀಡುವುದರಿಂದ ಆರ್ಥಿಕ ಹೊರಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪುನ: ಗುತ್ತಿಗೆಯನ್ನು ಸಂಘಕ್ಕೆ ಮರು ಮಂಜೂರು ಮಾಡಲು ಅಂದಿನ ಸಚಿವರು ಸೂಚಿಸಿದ್ದರು ಸಂಘವು 1995 ರಿಂದ ಸ್ವಾಧೀನಕ್ಕೆ ನೀಡಲುಕೋರಿದ್ದು, ಆದರೆ ಹಿಂದಿನ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ನಿಯಮಾವಳಿಗಳ ಪ್ರಕಾರ ಹಿಂದಿನ ದಿನಾಂಕದಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ 2017 ತಿದ್ದುಪಡಿ ನಿಯಮ ಜಾರಿಯಾದ ನಂತರ ಮರು ಮಂಜೂರಾತಿಗೆ ಅವಕಾಶವಿರುತ್ತದೆ. ಆದ್ದರಿಂದ ಸದರಿ ಗಣಿಗುತ್ತಿಗೆಯನ್ನು ರದ್ದುಪಡಿಸಿ ಹರಾಜು ಮೂಲಕ ವಿಲೇವಾರಿ ಮಾಡಲು ಟಿಪ್ಪಣಿ ಮಂಡಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರ ಅಭಿಪ್ರಾಯ ಭಿನ್ನವಾಗಿದ್ದರಿಂದ ಕಡತವನ್ನು ಮುಂದಿನ ನಿರ್ಣಯಕ್ಕೆ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಗಿತ್ತು. ದಿನಾಂಕ.20-09-2018 ರ ಸಚಿವ ಸಂಪುಟ ಸಭೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅಡ್ವೊಕೇಟ್ ಜನರಲ್‍ರವರು ದಿ.15-02-2019 ರಂದು ನೀಡಿದ ಅಭಿಪ್ರಾಯದಲ್ಲಿ ಸದರಿ ಕಲ್ಲುಗಣಿ ಗುತ್ತಿಗೆಯನ್ನು ಮರು ಮಂಜೂರು ಮಾಡಬಹುದಾಗಿ ತಿಳಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಹಾಗೂ ಸಚಿವರ ಸತತ ಪರಿಶ್ರಮದ ಫಲವಾಗಿ ಸಚಿವ ಸಂಪುಟ ಸಭೆಯಲ್ಲಿ ಗಣಿ ಗುತ್ತಿಗೆ ಮರು ಮಂಜೂರಾತಿ ಮಾಡಲು ತೀರ್ಮಾನಿಸಲಾಗಿದೆ. : – - - - – .