“ಕೇವಲ ವಿರೋಧ ಮಾಡುವುದಕ್ಕೆ ವಿರೋಧ ಪಕ್ಷ ಇರುವುದಲ್ಲ” : ಸಿ.ಟಿ.ರವಿ ಕಿಡಿ ಬೆಂಗಳೂರು,ಜನವರಿ,20,2021(..): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಹೇಗೆ ವ್ಯವಹರಿಸಬೇಕು ಎಂದು ಸುಮಾರು 30 ವರ್ಷಗಳ ಕಾಲ ಬಿಜೆಪಿ ತನ್ನ ನಡವಳಿಕೆಯ ಮುಖಾಂತರ ತೋರಿಸಿ‌ಕೊಟ್ಟಿದೆ. ಕೇವಲ ವಿರೋಧ ಮಾಡುವುದಕ್ಕೇ ವಿರೋಧ ಪಕ್ಷ ಇರುವುದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.ವಿರೋಧ ಪಕ್ಷ ದೇಶ ಕಟ್ಟುವ ಕೆಲಸದಲ್ಲಿ ಆಡಳಿತ ಪಕ್ಷದ ಹೆಗಲಿಗೆ ಹೆಗಲು ಕೊಟ್ಟು ಸಹರಿಸಬೇಕು. ಆದರೆ, ಸುಮಾರು ಎಪ್ಪತ್ತು‌ ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷವೊಂದು ದೇಶದ ಎಲ್ಲಾ ಸಂವಿಧಾನಿಕ ಸಂಸ್ಥೆಗಳ ಅಸ್ತಿತ್ವವನ್ನ ಅಳಿಸಲು‌ ನಿಂತಂತೆ ವ್ಯವಹರಿಸುತ್ತಿರುವುದು ನಿಜಕ್ಕೂ ದುರಂತ ಎಂದಿದ್ದಾರೆ. ಕೇಂದ್ರ ಸರಕಾರ ತಂದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಬೇಕು ಎನ್ನುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಈ ನೂತನ ಮಸೂದೆ ಹೇಗೆ ರೈತ ವಿರೋಧಿ ಅನ್ನುವುದನ್ನು ತೋರಿಸಬೇಕಲ್ಲವೆ? ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡುವ ನಿಜವಾದ ಗೌರವ. ಆದರೆ, ಕಾಂಗ್ರೆಸ್ ಪಕ್ಷ ಇವತ್ತು, ಇದೆಲ್ಲನ್ನು ಮರೆತು‌ ನಿಂತಿದೆ ಎಂದು ದೂರಿದ್ದಾರೆ. :--