ಕೋವಿಡ್ ಲಸಿಕೆ ಭ್ರಷ್ಟಾಚಾರ ಕೂಪ ಆಗಬಾರದು- ‘ಬಿಟಿಎಸ್-2020’ದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸಲಹೆ… ಬೆಂಗಳೂರು,ನವೆಂಬರ್,21,2020(..):ಕೋವಿಡ್ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು. “ಬೆಂಗಳೂರು ತಂತ್ರಜ್ಞಾನ ಮೇಳ-2020”ದ ಕೊನೆಯ ದಿನವಾದ ಶನಿವಾರ “ಸ್ವಾಸ್ಥ್ಯಕ್ಕಾಗಿ ತಂತ್ರಜ್ಞಾನಗಳಲ್ಲಿ ಹೂಡಿಕೆ” ಕುರಿತ ಸಂವಾದ ಗೋಷ್ಠಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದರು. ಮುಂಬರುವ ತಿಂಗಳುಗಳಲ್ಲಿ ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದಾಗ ಅದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಯಾರಿಗೆ ಸೋಂಕು ತಗುಲುವ ಅಪಾಯ ಹೆಚ್ಚೋ, ಉದಾಹರಣೆಗೆ ಆರೋಗ್ಯ ಸೇವೆಯಲ್ಲಿರುವವರು, ಪೊಲೀಸರು ಇಂಥವರಿಗೆ ಮೊದಲು ಲಸಿಕೆ ಹಾಕಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. “ಯಾರು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು” ಎಂಬುದನ್ನು ಕೋವಿಡ್ ಸೋಂಕು ಸನ್ನಿವೇಶ ದೃಢಪಡಿಸಿದೆ. ಇದನ್ನು ಅರ್ಥಮಾಡಿಕೊಂಡರೆ ಕಂಪನಿಗಳು ಮೂಲ ಸೌಕರ್ಯಕ್ಕಾಗಿ ಮಾಡುವ ಅನಗತ್ಯ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಜೊತೆಗೆ ತಮ್ಮ ನಿರ್ವಹಣಾ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಅನುಸರಿಸಿದರೆ ಅಂತಿಮವಾಗಿ ಅದು ಭೂಗ್ರಹದ ಮೇಲಿನ ಒತ್ತಡವನ್ನು ಕೂಡ ತಗ್ಗಿಸುತ್ತದೆ ಎಂದು ಸದ್ಗರು ಜಗ್ಗಿ ವಾಸುದೇವ್ ವಿವರಿಸಿದರು. ಕಂಪನಿಗಳು ಮನುಷ್ಯರನ್ನು ಸಂಪನ್ಮೂಲ ಎಂದು ನೋಡುವ ಧೋರಣೆ ಬದಲಾಗಬೇಕು. ಬದಲಿಗೆ ಮನುಷ್ಯರನ್ನು ಅಂತಃಸತ್ವವುಳ್ಳವರು ಎಂಬ ದೃಷ್ಟಿಯಲ್ಲಿ ನೋಡುವ ಹಾಗೂ ಆ ಅಂತಃಸತ್ವ ಅನಾವರಣಗೊಳ್ಳಲು ಅನುವಾಗುವ ಕಾರ್ಯರೀತಿ ಅನುಷ್ಠಾನಗೊಳಿಸುವ ಕುರಿತು ಆಲೋಚಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದರು. ಈಗ ತಂತ್ರಜ್ಞಾನದ ಬಲದಿಂದ ಜಗತ್ತಿನ ಯಾವುದೇ ಭಾಗದ ಜನರನ್ನು ತಲುಪಬಹುದಾಗಿದೆ. ಮುಂಚೆ ನಾವು ಕೆಲವೇ ಜನರನ್ನು ತಲುಪುವುದು ಕಷ್ಟವಾಗುತ್ತಿತ್ತು. ಈಗ ಅಲ್ಪಾವಧಿಯಲ್ಲಿ ನೂರಾರು ಕೋಟಿ ಜನರನ್ನು ತಲುಪಬಹುದಾಗಿದೆ. ಈ ತಂತ್ರಜ್ಞಾನವು ಸದುದ್ದೇಶಕ್ಕೆ ಹಾಗೂ ಆನಂದದಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಪ್ರತಿಪಾದಿಸಿದರು. ಬುದ್ಧಿ ಎಂದರೆ ಕೇವಲ ನೆನಪಿನ ಶಕ್ತಿ ಅಲ್ಲ. ಬುದ್ಧಿಗೆ ನಾಲ್ಕು ಆಯಾಮಗಳಿವೆ. ಬೌದ್ಧಿಕತೆ, ಅಹಂಕಾರ, ಮನಸ್ಸು (ಸಂಸ್ಕಾರ), ಚಿತ್ತ ಎಂಬ ಆಯಾಮಗಳ ಬಗ್ಗೆ ಭಾರತೀಯರು ಪ್ರಾಚೀನ ಕಾಲದಲ್ಲೇ ಮನಗಂಡಿದ್ದರು. ದುರದೃಷ್ಟವಶಾತ್ ಇಂಗ್ಲಿಷ್ ಶಿಕ್ಷಣ ಪದ್ಧತಿಯು ಬುದ್ಧಿ ಎಂದರೆ ಕೇವಲ ಜ್ಞಾಪಕ ಶಕ್ತಿ ಎಂಬ ಭ್ರಮೆ ಹುಟ್ಟಿಸಿತು. ಈ ದೃಷ್ಟಿಯಲ್ಲಿ ನೋಡಿದರೆ ಚಿಪ್ ಗಳನ್ನು ಹಾಗೂ ಸ್ಮಾರ್ಟ್ ಫೋನ್ ಗಳನ್ನು ಮನುಷ್ಯರಿಗಿಂತ ಹೆಚ್ಚು ಬುದ್ಧಿಶಾಲಿಗಳು ಎನ್ನಬೇಕಾಗುತ್ತದೆ ಎಂದರು. ಬ್ರಹ್ಮಾಂಡದಲ್ಲಿ ಗ್ರಹಗಳು, ನಕ್ಷತ್ರಗಳು, ಎಲ್ಲಾ ಆಕಾಶಕಾಯಗಳನ್ನು ಸೇರಿಸಿದರೂ ಭೌತಿಕ ಪ್ರಪಂಚವು ಹೆಚ್ಚೆಂದರೆ ಅದು ಶೇ 1 ರಷ್ಟು ಮಾತ್ರ ಆಗುತ್ತದೆ. ಉಳಿದ ಶೇ 99 ರಷ್ಟು ಭಾಗವು ನಮಗೆ ಏನೂ ಎಂದು ಗೊತ್ತಿಲ್ಲದ “ಶೂನ್ಯ”ವೇ ಆಗಿದೆ. ವಿಜ್ಞಾನವು ಶೇ 1 ರಷ್ಟಿರುವ ಭೌತಿಕ ಪ್ರಪಂಚದ ಬಗ್ಗೆ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ಅಧ್ಯಾತ್ಮವು ಶೇ 99ರಷ್ಟಿರುವ “ಶೂನ್ಯ”ವನ್ನೂ ದೃಷ್ಟಿಯಲ್ಲಿರಿಸಿಕೊಂಡು ಆಲೋಚನಾ ಮಗ್ನವಾಗಿರುತ್ತದೆ. ವಿಜ್ಞಾನ ಹಾಗೂ ಅಧ್ಯಾತ್ಮ ಬೇರೆ ಬೇರೆಯಲ್ಲ. ಆದರೆ ಅಧ್ಯಾತ್ಮದ ಚಿಂತನಾ ವ್ಯಾಪ್ತಿ ವಿಜ್ಞಾನಕ್ಕಿಂತ ವಿಶಾಲವಾದುದು ಎಂದು ಅಭಿಪ್ರಾಯಪಟ್ಟರು. ಪ್ರಪಂಚದಲ್ಲಿರುವ ಎಲ್ಲಾ ಗ್ರಂಥಾಲಯಗಳಲ್ಲಿರುವ ಪುಸ್ತಕಗಳೆಲ್ಲವನ್ನು ಓದಿದ ಮೇಲೂ ಯಾವುದೇ ವ್ಯಕ್ತಿ ತನಗೆ ಎಲ್ಲಾ ಗೊತ್ತು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಷ್ಟೆಲ್ಲಾ ಆದರೂ ಬ್ರಹ್ಮಾಂಡದ ಶೇ 1.ರಷ್ಟು ಮಾತ್ರವೂ ನಮಗೆ ತಿಳಿದಿಲ್ಲ. ಆದ್ದರಿಂದ ನಾವು “ನಮಗೆ ಗೊತ್ತಿಲ್ಲ” ಎಂದು ಹೇಳುವ ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ “ಏನೂ ಗೊತ್ತಿಲ್ಲ” ಎಂದು ಹೇಳಿಕೊಳ್ಳುವುದನ್ನು ಕಲಿಸಬೇಕು. ದುರಂತದ ಸಂಗತಿಯೆಂದರೆ ಇಂಗ್ಲಿಷ್ ಪ್ರಣೀತ ಶಿಕ್ಷಣ ಪದ್ಧತಿಯು ನಮ್ಮಲ್ಲಿ “ನನಗೆ ಎಲ್ಲಾ ಗೊತ್ತು” ಎಂಬ ಭ್ರಮೆ ಮೂಡಿಸುತ್ತಿದೆ. ಈ ಭಾವನೆಯು ನಮ್ಮ ಅರಿಯುವ ಸಾಮರ್ಥ್ಯಕ್ಕೆ ಮಬ್ಬು ಕವಿಸಿದೆ. ಯೋಗ ಎಂದರೆ ಕೇವಲ ದೇಹದ ವ್ಯಾಯಾಮ ಅಲ್ಲ. ಯೋಗ ಎಂದರೆ ಐಕ್ಯತೆ ಎಂದು ಅರ್ಥ. ಅಂದರೆ, ವ್ಯಕ್ತಿಯ ವೈಯಕ್ತಿಕ ಅಸ್ಮಿತೆಯು ಬಾಹ್ಯ ಜಗತ್ತಿನೊಂದಿಗೆ ಐಕ್ಯವಾಗುವುದು ಎಂದರ್ಥ. ಇದನ್ನೇ ಭಾರತೀಯ ಸಂಸ್ಕೃತಿ “ಅಹಂ ಬ್ರಹ್ಮಾಸ್ಮಿ” ಎಂದು ಕರೆಯುತ್ತದೆ. ಈ ಪ್ರಜ್ಞೆ ಬೆಳೆದರೆ ಬೇರೆ ಯಾವ ನೈತಿಕತೆಯೂ ಬೇಕಿಲ್ಲ. ಆಧುನಿಕ ಶಿಕ್ಷಣ ಪದ್ಧತಿ ಇದಕ್ಕೆ ತದ್ವಿರುದ್ಧವಾಗಿ ಸ್ವಕೇಂದ್ರಿತ ಮನೋಭಾವ ಬೆಳೆಸುತ್ತಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು. ನಮ್ಮ ಮಕ್ಕಳು ಮರ-ಗಿಡ, ಬೆಳಕು, ಬಯಲು, ನದಿ, ತೊರೆಗಳಿಗೆ ತೆರೆದುಕೊಂಡು ಬದುಕಬೇಕು. ಆದರೆ ಈಗ ನಗರಗಳಲ್ಲಿ ಮಕ್ಕಳು ಮನೆಯಿಂದ ಆಚೆ ಕಾಲಿಟ್ಟರೆ ಸಾಕು ವಾಹನಗಳ ಗದ್ದಲದಲ್ಲಿ ಸಿಲುಕುವಂತಾಗಿದೆ. ಇದಕ್ಕೆ ಪರಿಹಾರ ಕಂಡಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು. ತಮ್ಮ “ಈಶ” ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿರುವ 49 ಗ್ರಾಮಗಳಲ್ಲಿ ಕೋವಿಡ್ ಸೋಂಕು ಪ್ರರಣಗಳು ವರದಿಯಾಗಲಿಲ್ಲ (ಹೊರಗಿನಿಂದ ಬಂದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಹೊರತುಪಡಿಸಿ). ತಜ್ಞರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ನೈರ್ಮಲ್ಯ ಹಾಗೂ ರೋಗ ನಿರೋಧಕ ಶಕ್ತಿ ಬಗ್ಗೆ ನಾವು ಮುಂಚಿನಿಂದಲೂ ಅರಿವು ಮೂಡಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಸದ್ಗುರು ವಿವರಿಸಿದರು. ಇಂಟೆಲ್ ಇಂಡಿಯಾ ಕಂಟ್ರಿ ಹೆಡ್ ನಿವೃತಿ ರಾಯ್ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಗೋಷ್ಠಿ ನಿರ್ವಹಿಸಿದರು. ಸಂವಾದದಲ್ಲಿ ಸದ್ಗುರು ನುಡಿಗಳು: : - - – - - --2020