ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹೇಳಿಕೆ ವಿಚಾರ: ಸಿದ್ಧರಾಮಯ್ಯಗೆ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು… ಬೆಂಗಳೂರು,ಅಕ್ಟೋಬರ್,28,2020(..):ಈಗ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು ಸಾಧ್ಯವೇ ಇಲ್ಲ. ಅವರು ಎಂದಿಗೂ ವಿಲನ್.. ಕಾಂಗ್ರೆಸ್ ಪಕ್ಷದ ಒಂದು ವರ್ಗಕ್ಕೂ ಸಿದ್ದರಾಮಯ್ಯ ವಿಲನ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮುಂದೆ ಕೂಡ ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿಗೆ ಬರುವ ಕಾಲ ಬಹಳ ದೂರವಿಲ್ಲ ಎಂದು ವ್ಯಂಗ್ಯವಾಡಿದರು. ಜೆಡಿಎಸ್‌ ಅನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ…. ಜೆಡಿಎಸ್‌ ಬಡವರು, ಶ್ರಮಿಕರು, ರೈತರು ಬೆಳೆಸಿದ ಪಕ್ಷ. ನಮ್ಮ ಹೊಣೆಗಾರಿಕೆ ಏನಿದ್ದರೂ ಜನರದ್ದು, ನಾವು ಅಂಬಾನಿ, ಆದಾನಿಗೆ ನಮ್ಮ ಪಕ್ಷದ ಜವಾಬ್ದಾರಿ ನೀಡಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ನಾವು ಟಿಕೆಟ್‌ ನೀಡಿದ್ದೇವೆ. ಜೆಡಿಎಸ್‌ನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಕೊರೊನಾ ಬಂದಾಗ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಅಂದ್ರು, ಆಮೇಲೆ ದೀಪ ಬೆಳಗಿಸಿ ಅಂದ್ರು. ಆ ದೀಪ ಹಚ್ಚಿ ಬಿಜೆಪಿಯವರು ತಮ್ಮ ಜೀವನ ಬೆಳಗಿಸಿಕೊಂಡ್ರು. ಜನರ ಕಷ್ಟಗಳಿಗೆ ದೀಪ ಹಚ್ಚಿ ಬೆಳಕು ನೀಡಲಿಲ್ಲ ಎಂದು ಕಿಡಿಕಾರಿದ ಹೆಚ್.ಡಿಕೆ, ಹತ್ತು ವರ್ಷದಿಂದ ಬಿಜೆಪಿ, ಕಾಂಗ್ರೆಸ್‌ ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಪ್ರತಿವರ್ಷ ಕಾಲುವೆ ದುರಸ್ಥಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೂ, ಮಳೆ ಬಂದಾಗ ಬೆಂಗಳೂರಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಭೆಗೆ ಅಡ್ಡಿಪಡಿಸಿದವರನ್ನು ಬಂಧಿಸಿ ಎಂದು ಪೊಲೀಸ್‌ ಠಾಣೆ ಎದುರು ರಾತ್ರಿವರೆಗೂ ಪ್ರತಿಭಟನೆ ನಡೆಸುವ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್‌ ನಾಯಕರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ತಮ್ಮ ಶಾಸಕರ ಮನೆ, ಪೊಲೀಸ್‌ ಠಾಣೆ ಸುಟ್ಟವರನ್ನು ಬಂಧಿಸಿ ಎಂದು ಧರಣಿ ನಡೆಸಬೇಕಿತ್ತು ಎಂದು ಹೇಳಿದರು. ಹಳ್ಳಿಯಲ್ಲಿರುವ ಡಿ.ಕೆ.ರವಿ ಅವರ ತಂದೆ-ತಾಯಿಯನ್ನೇ ನೋಡಲಿಲ್ಲ.. ಕಾಂಗ್ರೆಸ್‌ ಅಭ್ಯರ್ಥಿ ನಾನು ನೊಂದಿದ್ದೇನೆ, ಬಡ ಕುಟುಂಬಗಳ ರಕ್ಷಣೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ, ಹಳ್ಳಿಯಲ್ಲಿರುವ ಡಿ.ಕೆ.ರವಿ ಅವರ ತಂದೆ-ತಾಯಿಯನ್ನೇ ನೋಡಲಿಲ್ಲ. ಅವರ ಬದುಕಿಗೆ ಒಂದು ದಾರಿ ಮಾಡಿ ಕೊಡಲಾಗಲಿಲ್ಲ. ಈಗ ನಿಮ್ಮ ಕಷ್ಟಗಳನ್ನೆಲ್ಲಾ ಕೇಳ್ತಾರಾ, ಸಮಸ್ಯೆಗಳನ್ನು ಬಗೆಹರಿಸ್ತಾರಾ ಎಂದು ಹೆಚ್.ಡಿ ಕುಮಾರಸ್ವಾಮಿ ಜನರನ್ನು ಪ್ರಶ್ನಿಸಿದರು. ನಮ್ಮ ದುಡ್ಡಿನಲ್ಲಿ ಮಹಾರಾಷ್ಟ್ರದವರ ಪ್ರತಿಮೆಯನ್ನು ನಮ್ಮ ನೆಲದಲ್ಲಿ ಬಿಜೆಪಿಯವರು ಸ್ಥಾಪಿಸುತ್ತಾರೆ. 2-3 ತಿಂಗಳಲ್ಲಿ ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಮೊನ್ನೆ ಮಳೆ ಬಂದಾಗ ಬೆಂಗಳೂರೇ ಕೊಚ್ಚಿಕೊಂಡು ಹೋಯ್ತು. ಇದೇನಾ ಇವರ ಮಾದರಿ ನಗರ ಎಂದು ಪ್ರಶ್ನಿಸಿದ ಹೆಚ್,ಡಿ ಕುಮಾರಸ್ವಾಮಿ, 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಹಾಗೂ ಮೈಸೂರು ಹೊರವಲಯಗಳ ಅಭಿವೃದ್ಧಿಗೆ 25 ಸಾವಿರ ರೂ. ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ, ಮಳವಳ್ಳಿ ಶಾಸಕ ಅನ್ನದಾನಿ, ಪರಿಷತ್‌ ಸದಸ್ಯ ರಮೇಶ್‌ ಗೌಡ, ಮಾಜಿ ಪರಿಷತ್ ಸದಸ್ಯ ಟಿ.ಎನ್‌.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಸೇರಿ ಅನೇಕ ಮುಖಂಡರು ಇದ್ದರು. ನನ್ನ ಯೋಜನೆಗಳಿಗೆ ಸರಕಾರ ಕೊಕ್ಕೆ ಕೇವಲ ರೈತರ ಸಾಲಮನ್ನಾ ಮಾಡಿರುವುದಲ್ಲದೇ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿ ಎಂದು ಬಡವರ ಬಂಧು ಆರಂಭಿಸಿದೆ. ಸಾಲಗಾರರ ಶೋಷಣೆಯಿಂದ ಜನರನ್ನು ರಕ್ಷಿಸಲು ಋಣಮುಕ್ತ ಕಾಯಿದೆ ಜಾರಿಗೆ ತಂದಿದ್ದೆ. ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ನೂರು ಕೋಟಿ ರೂ. ತೆಗೆದಿರಿಸಿದ್ದೆ. ಇವುಗಳನ್ನೆಲ್ಲಾ ಈಗಿನ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು. ರಾಜರಾಜೇಶ್ವರಿ ನಗರಕ್ಕೆ ಶಾಂತಿ ಬೇಕು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಿಜೆಪಿ ಅಭ್ಯರ್ಥಿ ಹಣ ಲೂಟಿ ಮಾಡಿದ್ದಾರೆ, ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ, ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರೆ, ಕನಕಪುರದಿಂದ ಗೂಂಡಾಗಳನ್ನು ಕರೆಸಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿರತ್ನ ಕಾಂಗ್ರೆಸ್‌ ವಿರುದ್ಧ ಆರೋಪಿಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳಿಗಿಂತ ರಾಜರಾಜೇಶ್ವರಿ ನಗರದಲ್ಲಿ ನಮಗೆ ಶಾಂತಿಯ ಅವಶ್ಯಕತೆ ಇದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ’ಹಕ್ಕುಪತ್ರ ಕೊಟ್ರೆ, ಕಣ್ಣು ಕೊಟ್ಟಂಗೆ ನೀವುʼ ಬಂಗಾರಪ್ಪ ನಗರದ ಮಹಿಳೆಯೊಬ್ಬರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಮಗೆ ಹಕ್ಕುಪತ್ರ ಕೊಡಿಸಿ. ಇಲ್ಲಿ ಬೆದರಿಕೆ ಹಾಕ್ತಾರೆ ನಮಗೆ ರಕ್ಷಣೆ ಕೊಡಿಸಿ. ನೀವು ಹಕ್ಕು ಪತ್ರ ಕೊಟ್ರೆ ನಮಗೆ ಎರಡು ಕಣ್ಣು ಕೊಟ್ಟಂಗೆ ಎಂದು ಮನವಿ ಮಾಡಿದರು. ಮಹಿಳೆಯ ಅಹವಾಲು ಆಲಿಸಿದ ಮಾಜಿ ಸಿಎಂ ಹೆಚ್.ಡಿಕೆ, ನಿಮಗೇನೆ ಕಷ್ಟ ಬಂದ್ರೂ, ಯಾರೇ ಬೆದರಿಕೆ ಹಾಕಿದ್ರೂ ನಮ್ಮ ಮನೆಗೆ ಬನ್ನಿ, ಹಕ್ಕುಪತ್ರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. : – - - – -