ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಅಮಾನವೀಯ ನಡೆ –ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತರಾಟೆ… ಬೆಂಗಳೂರು,ಸೆಪ್ಟಂಬರ್,22,2020(..):ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ನಮ್ಮ ಹೃದಯ ಮಿಡಿಯಬೇಕಿತ್ತು. ಆದರೆ ರಾಜ್ಯ ಸರ್ಕಾರ ರೈತರು, ಬಡವರು, ಕಾರ್ಮಿಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದು, ರಾಜ್ಯದ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಧಾನಸಭೆಯಲ್ಲಿ ಹರಿಹಾಯ್ದಿದ್ದಾರೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಮಂಗಳವಾರದ ಕಲಾಪದಲ್ಲಿ ಕೊರೋನಾ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ಸರ್ಕಾರದ ವೈಫಲ್ಯ, ಅಕ್ರಮ, ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು: ಕೊರೋನಾ ಪರಿಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಇದನ್ನು ದೇವರ ಆಟ ಎಂದು ಹೇಳಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಅಂತಾ ಇದ್ದ ಮೇಲೆ ಅದಕ್ಕೆ ಅದರದೇ ಆದ ಜವಾಬ್ದಾರಿ, ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಕಳೆದ ಅಧಿವೇಶನ ನಡೆಯುವಾಗ ಈ ಪರಿಸ್ಥಿತಿ ಎದುರಾಗಿತ್ತು. ದೇಶದ ಪ್ರಧಾನಿಗಳು ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿ ಲಾಕ್ ಡೌನ್ ಹೇರಿದರು. ದೀಪ ಹಚ್ಚಲು, ಗಂಟೆ ಹೊಡೆಯಲು ನಾಲ್ಕು ದಿನ ಸಮಯ ಕೊಟ್ಟರು. ನಾವು ಅದನ್ನು ಸ್ವೀಕರಿಸಿದೆವು. ಮುಖ್ಯಮಂತ್ರಿಗಳು ಸ್ವಲ್ಪ ಮನಸ್ಸು ಮಾಡಿ ಒಂದು ದಿನದೊಳಗೆ ಹಳ್ಳಿಗೆ ಹೋಗುವವರು ಹೋಗಿ ಎಂದರು. ಬಡವರ ಅನ್ನದಲ್ಲಿ ರಾಜಕೀಯ ಮಾಡಬೇಕಾ..? ರಾಜ್ಯದ ಎಲ್ಲ ಪಕ್ಷಗಳು ಸರ್ಕಾರಕ್ಕೆ ಸಹಕಾರ, ಬೆಂಬಲ ನೀಡಿವೆ. ಪ್ರಧಾನಮಂತ್ರಿಗಳು 21 ದಿನಗಳಲ್ಲಿ ಈ ಯುದ್ಧ ಗೆಲ್ಲುತ್ತೇವೆ ಅಂತಾ ಹೇಳಿದ್ದರೂ ನಾವು ಸಹಕಾರ ನೀಡುತ್ತಲೇ ಬಂದಿದ್ದೇವೆ. ಆದರೆ ಆಡಳಿತರೂಢ ಬಿಜೆಪಿಯವರು ವಿವಿಧ ಇಲಾಖೆಗಳು, ಅಕ್ಷಯ ಪಾತ್ರೆಯವರು, ಇನ್ಫೋಸಿಸ್ ಸಂಸ್ಥೆಯವರು ಜನರಿಗೆ ಕೊಟ್ಟ ಆಹಾರ ಕಿಟ್ ಗಳ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚಿದಿರಲ್ಲಾ… ಯಾವ ವ್ಯವಸ್ಥೆಯಲ್ಲಿ ಈ ಸರ್ಕಾರ ನಡೆಯುತ್ತಿದೆ. ಆನೇಕಲ್ ನಲ್ಲಿ ಬಾಣಂತಿಯರು, ಮಕ್ಕಳ ಪೌಷ್ಠಿಕ ಆಹಾರ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ಅಕ್ರಮ ಮಾಡಿದರಲ್ಲ ಇವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ..? ಇದು ಒಂದು ಸರ್ಕಾರನಾ? ನಾವು ರಾಜಕಾರಣ ಮಾಡಬೇಕು, ಮಾಡೋಣ. ಆದರೆ ಕೊರೋನ ಸಙಜಷದಟದ ಸಮಯದಲ್ಲೂ ಬಡವರಿಗೆ ಹಂಚುವ ಆಹಾರದಲ್ಲೂ ರಾಜಕಾರಣ ಮಾಡಬೇಕಿತ್ತಾ? ಬಡವರು ತಿನ್ನುವ ಆಹಾರದಲ್ಲಿ ಪ್ರಚಾರ ಪಡೆದು ಮತ ಕೇಳಬೇಕಾ? ಇದು ನಾಚಿಕೆಗೇಡಿನ ವಿಚಾರ. ವಿರೋಧ ಪಕ್ಷದವರು ಅಕ್ರಮದ ಬಗ್ಗೆ ಆರೋಪ ಮಾಡಿದಾಗ ನೀವು ಕ್ರಮ ಜರುಗಿಸಲಿಲ್ಲ ಎಂದರೆ, ಈ ಅಕ್ರಮದಲ್ಲಿ ನೀವೂ ಭಾಗಿಯಾಗಿದ್ದೀರಿ ಎಂಬುದನ್ನು ತೋರಿಸುತ್ತದೆ. ಎಷ್ಟು ರೈತರಿಗೆ ನೆರವಾಗಿದ್ದೀರಿ? ಹೂವು, ತರಕಾರಿ, ಹಣ್ಣು ಬೆಳೆದ ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೇವೆ ಎಂದು ಹೇಳಿದಿರಿ. ಎಷ್ಟು ರೈತರ ಬೆಳೆ ಖರೀದಿ ಮಾಡಿದ್ದೀರಿ, ಎಷ್ಟು ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೀರಿ, ಎಷ್ಟು ರೈತರಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದೀರಿ? ಕೃಷಿ ಸಚಿವರು ಉತ್ತರ ನೀಡಲಿ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡಲ್ಲ ಅಂತಾ ಯಡಿಯೂರಪ್ಪನವರು ಹೇಳಿಕೆ ನೀಡಿದರು. ಆದೇಶ ಹೊರಡಿಸಿದರು. ಆದರೆ ಎಷ್ಚು ಅಧಿಕಾರಿಗಳು ಹೋಗಿ ಬೆಳೆ ನಷ್ಟದ ಸಮೀಕ್ಷೆ ಮಾಡಿದ್ದಾರೆ? ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ: ಈ ಸರ್ಕಾರ ರೈತರು, ಕಾರ್ಮಿಕರನ್ನು ರಕ್ಷಿಸುವಲ್ಲೂ ವಿಫಲವಾಯಿತು. ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ಏರಿಕೆ ವಿರುದ್ಧ ನಾವು ಹೋರಾಟ ಮಾಡಿದ ಮೇಲೆ ದೊಡ್ಡ ಮನಸ್ಸು ಮಾಡಿ ಅವರಿಗೆ ಐದು ದಿನಗಳ ಕಾಲ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ಅಶೋಕ್ ಅವರು ತಮ್ಮ ಆತ್ಮ ಸಂತೋಷಕ್ಕಾಗಿ ನನ್ನ ಚೆಕ್ ಅನ್ನು ಬೋಗಸ್ ಎಂದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಏನು? ಈ ಕಠಿಣ ಸಮಯದಲ್ಲಿ ನಮ್ಮ ಹೃದಯ ಜನರಿಗಾಗಿ ಮಿಡಿಯುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಈ ಕಾಯಿಲೆ ಹರಡಿದೆ. ಹೊರ ದೇಶದಿಂದ ಬರುವವರನ್ನು ಮುಂಚಿತವಾಗಿಯೇ ತಡೆದಿದ್ದರೆ, ಇವತ್ತು ಇಷ್ಟು ತೊಂದರೆ ಆಗುತಿತ್ತಾ? ನಿಮ್ಮ ಬೇಜವಾಬ್ದಾರಿ ತನಕ್ಕೆ ಇಡೀ ದೇಶ ನರಳುವಂತಾಗಿದೆ. ಈ ಸಮಯದಲ್ಲಿ ಎಲ್ಲ ಪಕ್ಷಗಳು ಸರ್ಕಾರಕ್ಕೆ ಬೆಂಬಲವಾಗಿ ನಿಂತವು. ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡಬೇಕು ಅಂತಾ ನಾವು ಮನವಿ ಮಾಡಿದೆವು. ಸರ್ಕಾರವೂ ಒಂದಷ್ಟು ಘೋಷಣೆ ಮಾಡಿತು. ಯಡಿಯೂರಪ್ಪನವರು 1610 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಚಾಲಕರಿಗೆ, ನೇಕಾರರಿಗೆ, ಮಡಿವಾಳರಿಗೆ ಹಾಗೂ ಇತರೆ ವರ್ಗದವರಿಗೆ ಪ್ರತಿ ತಿಂಗಳು 10 ಸಾವಿರ ಕೊಟ್ಟು ಸಹಾಯ ಮಾಡಿ ಅಂತಾ ಮನವಿ ಮಾಡಿದೆವು. ಆದರೆ ಮುಖ್ಯಮಂತ್ರಿಗಳು ಚಾಲಕರಿಗೆ 5 ಸಾವಿರ, ನೇಕಾರರಿಗೆ 2 ಸಾವಿರ, ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಘೋಷಣೆ ಮಾಡಿದರು. ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಎಷ್ಟು ಜನಕ್ಕೆ ತಲುಪಿದೆ? ಈ ಬಗ್ಗೆ ಮಾಹಿತಿ ಪಡೆಯೋಣ ಎಂದರೆ ಕಾರ್ಮಿಕ ಸಚಿವರು ಇಲ್ಲಿ ಇಲ್ಲ. ಇವತ್ತಿನವರೆಗೂ ಶೇ.10-20 ರಷ್ಟು ಜನರಿಗೆ ಈ ಪರಿಹಾರ ಹಣ ತಲುಪಿಲ್ಲ. ಹಳ್ಳಿಯಲ್ಲಿರುವ ಕ್ಷೌರಿಕನಾಗಲಿ, ಚಾಲಕನಾಗಲಿ ಮೋಸ ಮಾಡಲು ಸಾಧ್ಯವಾ? ಸರ್ಕಾರ ತನ್ನ ಸಿಬ್ಬಂದಿ ಬಳಸಿಕೊಂಡು ಸಮೀಕ್ಷೆ ಮಾಡಿ ಅವರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ನೀಡಿ ಫೋಟೋ ತೆಗೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರೆ, ಕಾರ್ಮಿಕರು ಯಾಕೆ ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದರು. ಸಾಂಪ್ರದಾಯಿಕ ವೃತ್ತಿ ಅವಲಂಭಿಸಿರುವವರು ಕೇವಲ ಕಾರ್ಮಿಕರಲ್ಲ ಸ್ವಾಮಿ, ಅವರು ಈ ದೇಶ ನಿರ್ಮಾಣ ಮಾಡುತ್ತಿರುವವರು. ಇಂದು ನಾವು ಚೆನ್ನಾಗಿ ಕಾಣುತ್ತೇದ್ದೇವೆ, ಒಳ್ಳೆಯ ಬಟ್ಟೆ ಹಾಕಿಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಅವರೇ ಕಾರಣ. ಅವರನ್ನು ನಾವು ಎಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು, ಅವರ ಕಷ್ಟಕ್ಕೆ ಸ್ಪಂದಿಸಿ 24 ರಿಂದ 48 ಗಂಟೆಗಳಲ್ಲಿ ಅವರಿಗೆ ಪರಿಹಾರ ತಲುಪುವಂತೆ ಮಾಡಬೇಕಿತ್ತು. ಆದರೆ ಇವತ್ತಿನವರೆಗೂ ಅದು ಸಾಧ್ಯವಾಗಿಲ್ಲ. ಈ ಸರ್ಕಾರಕ್ಕೆ ಕೊನೇ ಪಕ್ಷ ವೃದ್ಧರಿಗೆ, ವಿಧವೆಯರಿಗೆ, ವಿಶೇಷಚೇತನರಿಗೆ ಪಿಂಚಣಿ ನೀಡಲು ಸಾಧ್ಯವಾಗಿಲ್ಲ. ಅದನ್ನು ನೀಡಲು ಈಗ ಕೆ1, ಕೆ2 ಅಂತಾ ಏನೇನೋ ವಿಂಗಡಣೆ ಮಾಡಿದ್ದಾರೆ. 20, 30 ವರ್ಷಗಳಿಂದ 500, 1000 ರೂಪಾಯಿ ಕೊಡಲಾಗುತ್ತಿದೆ. ಇದನ್ನು ನೀಡುವುದರಲ್ಲೂ ರಾಜಕೀಯ ಮಾಡಬೇಕಾ? ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ ಸಚಿವ ಸುಧಾಕರ್ ಅವರು ಒಂದು ಕಡೆ ಹೇಳಿಕೆ ನೀಡುತ್ತಾರೆ. ನಾವು ಕಾಂಗ್ರೆಸ್ ಸರ್ಕಾರದ ಅಕ್ರಮ ಬಿಚ್ಚಿಡುತ್ತೇವೆ ಎಂದು. ಅವರು ಕೇವಲ ಬಿಚ್ಚಿಡುವುದಲ್ಲ, ಹರಿದು ಹಾಕಲಿ. ನಾವು ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದರೆ ಯಾವೇ ತನಿಖೆ ಬೇಕಾದರೂ ನಡೆಸಿ ಸಾಬೀತುಪಡಿಸಿ. ಶಿಕ್ಷೆ ಅನುಭವಿಸಲು ನಾವು ಸಿದ್ಧ. ಬೇಕಾದರೆ ನೇಣಿಗೆ ಏರಿಸಿ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ತಪ್ಪು ಸಿದ್ದರಾಮಯ್ಯನವರೇ ಮಾಡಿರಲಿ, ಡಿ.ಕೆ. ಶಿವಕುಮಾರೇ ಮಾಡಿರಲಿ, ಎಚ್.ಕೆ ಪಾಟೀಲರೇ ಮಾಡಿರಲಿ. ನಾವೇನು ದೇವ ಲೋಕದಿಂದ ಇಳಿದು ಬಂದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು, ಅನುಭವಿಸಲು ಸಿದ್ಧರಿದ್ದೇವೆ. ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡದಿರುವುದೂ ಒಂದು ಸಂಸ್ಕೃತಿನಾ? ಆದರೆ ಈ ಸರ್ಕಾರ ಏನು ಮಾಡುತ್ತಿದೆ. ಬಡವರು ತಿನ್ನುವ ಅನ್ನದಲ್ಲಿ ಅಕ್ರಮ ಮಾಡುತ್ತಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿರುವುದು ಒಂದು ಸರ್ಕಾರವೇ? ಈ ಸರ್ಕಾರದ ಅಕ್ರಮವನ್ನು ನಾವು ನೋಡಿಕೊಂಡು ಸುಮ್ಮನಿರಬೇಕಾ? ಎಷ್ಟು ದಿನ ನಾವು ತಾಳ್ಮೆಯಿಂದ ಇರಬೇಕು. ಮಾಧ್ಯಮಗಳು ಪ್ರತಿ ವಿಚಾರವನ್ನು ಪ್ರಕಟಿಸಿವೆ. ಕೊರೋನಾದಿಂದ ಸತ್ತವರ ಹೆಣಕ್ಕೆ ಒಂದು ಒಳ್ಳೆಯ ಅಂತ್ಯ ಸಂಸ್ಕಾರ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಇದು ಯಾವ ಸಂಸ್ಕೃತಿ? ಬಳ್ಳಾರಿಯಲ್ಲಿ ಹೆಣಗಳನ್ನು ಗುಂಡಿಗೆ ಸುರಿದರಲ್ಲಾ.., ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದೀರಿ? ಇದೇನಾ ಈ ದೇಶದ ಸಂಸ್ಕೃತಿ. ನಮ್ಮ ಸಂಸ್ಕೃತಿ ನಮ್ಮ ಆಸ್ತಿ. ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ. ಇದನ್ನು ನೋಡಿಕೊಂಡು ಇರಬೇಕಾ? ನನ್ನ ತಮ್ಮ ಪಿಪಿಇ ಕಿಟ್ ಹಾಕಿಕೊಂಡು ಹೆಣಕ್ಕೆ ಅಂತ್ಯ ಸಂಸ್ಕಾರ ಮಾಡಲು ಹೋಗಿದ್ದ. ಅದಾದ ಮೇಲೆ ಒಂದಿಬ್ಬರು ನಾಯಕರು ಹೋದರು. ಪರಿಸ್ಥಿತಿ ಕೈ ಮೀರಿದ ನಂತರ ಆಸ್ಪತ್ರೆಗಳ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ನಾವು ಆರಂಭದಲ್ಲೇ ಹೇಳಿರಲಿಲ್ಲವಾ? ವೈದ್ಯಕೀಯ ಕಾಲೇಜುಗಳನ್ನು ಕರೆದು ಸಭೆ ನಡೆಸಿ, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿರಲಿಲ್ಲವೇ? ಹೀಗೆ ಸರ್ಕಾರ ಪ್ರತಿ ಹಂತದಲ್ಲೂ ವಿಫಲವಾಗಿದೆ. ಅಧಿಕಾರಿಗಳು ಸುಲಿಗೆಗೆ ನಿಂತಿದ್ದಾರೆ. ಮಂತ್ರಿಗಳು ಈ ಎಲ್ಲಕ್ಕೂ ಜವಾಬ್ದಾರರಾಗಿದ್ದಾರೆ. ನೀವು ಹೇಳಿದ್ದಕ್ಕೆಲ್ಲ ನಾವು ಒಪ್ಪಿಕೊಂಡರೂ ಈ ರಾಜ್ಯವನ್ನು 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದೀರಿ. ನೀವು ತೋರಿದ ಅಮಾನವೀಯ ನಡೆಯನ್ನು ಈ ರಾಜ್ಯದ ಜನ ಕ್ಷಮಿಸುವುದಿಲ್ಲ. ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೆ ಒಳಗಾಯಿತು. ಇದು ಸೋಂಕಿತ ಸರ್ಕಾರ. ಅಕ್ಕಿ ಅಕ್ರಮ ದಾಸ್ತಾನು, ಆಹಾರ ಕಿಟ್ ದುರ್ಬಳಕೆ ಕುರಿತು ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ವಿಚಾರಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಕೊಡುತ್ತಾರಂತೆ. ಆ ರವಿಕುಮಾರ್ ನೋಟೀಸ್ ನೀಡುವುದಲ್ಲ, ರಾಜ್ಯದ ಮುಖ್ಯಕಾರ್ಯದರ್ಶಿಗಳು ನನಗೆ ನೋಟೀಸ್ ನೀಡಲಿ. ನಾವು ಅದನ್ನು ಎದುರಿಸಲು ಸಿದ್ಧ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ನೋಟಿಸ್, ಕೇಸುಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಹಾಸಿಗೆ, ದಿಂಬು, ಮತ್ತಿತರ ಪರಿಕರಗಳ ಖರೀದಿಯಲ್ಲಿನ ಕೋಟಿ, ಕೋಟಿ ಲೂಟಿ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಸಲಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. : - - – - -