ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 105ನೇ ಜಯಂತಿ: ಅನಿಮೇಷನ್‌ ಚಿತ್ರ ಬಿಡುಗಡೆ ಶ್ರೀಗಳ ಸೇವೆ ಸ್ಮರಿಸಿದ ಸಿಎಂ ಬಿಎಸ್ ವೈ… ಮೈಸೂರು,ಆಗಸ್ಟ್,29, 2020(..); ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 105ನೇ ಜಯಂತಿ ಹಿನ್ನೆಲೆ ಇಂದು ಡಿಜಿಟಲ್ ಮಾದ್ಯಮದ ಮೂಲಕ ಸಮಾರಂಭ ಆಯೋಜಿಸಲಾಗಿತ್ತು. ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ರಾಜೇಂದ್ರ ಶ್ರೀಗಳ ಅನಿಮೇಷನ್‌ ಚಿತ್ರ ಬಿಡುಗಡೆ ಮಾಡಿ ಮಾತನಾಡಿದರು. ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇಯ ಜಯಂತಿ ಉತ್ಸವದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಮಹಾನ್ ಸಂತರು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು ದಾಸವೇರಣ್ಯರು ತಮ್ಮ ಬದುಕನ್ನು ಮಾನವನ ಉದ್ಧಾರಕ್ಕಾಗಿ ಮುಡಿಪಾಗಿಸಿ ಮಹಾಬೆಳಕಾದವರು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಮರಿಸಿದರು. ಮಹಾನ್ ಸಂತರಲ್ಲಿ ಒಬ್ಬರಾದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಲೋಕಕಲ್ಯಾಣಕ್ಕಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಕರೋನಾದ ಹಾವಳಿಯಿಂದ ಈ ಬಾರಿ ರಾಜೇಂದ್ರ ಶ್ರೀಗಳ ಜಯಂತಿ ಮಹೋತ್ಸವದಲ್ಲಿ ಆನ್‍ಲೈನ್ ಮೂಲಕ ಪಾಲ್ಗೊಂಡು ಪರಮಪೂಜ್ಯರ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಇದೊಂದು ಒಳ್ಳೆಯ ವೇದಿಕೆಯಾಗಿದೆ ಎಂದರು. ಅನ್ನ, ಅರಿವು, ಆರೋಗ್ಯ, ಸಮಾಜ ಸುಧಾರಣೆ, ಧರ್ಮಜಾಗೃತಿ, ಆಧ್ಯಾತ್ಮ ಕ್ಷೇತ್ರದಲ್ಲಿ ಜಗದ್ಗುರುಗಳು ಭದ್ರ ಬುನಾದಿ ಹಾಕಿದ್ದಾರೆ. ಜೆ.ಎಸ್.ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ನೀಡುವ ಮಹತ್ಕಾರ್ಯವನ್ನು ಮಠದ ವತಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸುಸಂದರ್ಭದಲ್ಲಿ ಶ್ರೀಗಳ ಜೀವನ ಮೌಲ್ಯಗಳು ಹಾಗೂ ಶ್ರೀಮಠದ ಸಾಧನೆಗಳನ್ನು ಬಿಂಬಿಸುವ ಕೃತಿಗಳು ಹಾಗೂ ಆನಿಮೇಷನ್ ಚಿತ್ರಗಳನ್ನು ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಶ್ರೀಗಳು ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿದ್ದು, ಈ ಭಾಗದ ಜನರು ಸೌಹಾರ್ದಯುತವಾಗಿ ಬದುಕಲು ಸ್ಪೂರ್ತಿಯಾಗಿದ್ದಾರೆ. ಮಠದ ಅನ್ನ ದಾಸೋಹ, ಜ್ಞಾನ ದಾಸೋಹದಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವುದು ಶ್ಲಾಘನೀಯ. ಶತಮಾನಗಳಿಂದ ದೀನ ದಲಿತರು ಎಂಬ ಬೇಧಭಾವವಿಲ್ಲದೆ ದಾಸೋಹ ನಡೆಸಿ ಸಮ-ಸಮಾಜದ ನಿರ್ಮಾಣಕ್ಕೆ ಶ್ರೀ ಮಠ ಶ್ರಮಿಸಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಬಿಎಸ್ ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು. ಡಿಸಿಎಂ ಅಶ್ವತ್ ನಾರಾಯಣ್ ಅವರು ಪ್ರಸಾದ ವಿಶೇಷ ಮಾಸಪತ್ರಿಕೆ ಬಿಡುಗಡೆ ಮಾಡಿದರು. ಮಾಜಿ ಪ್ರದಾನಿ ಎಚ್.ಡಿ ದೇವೆಡಗೌಡ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಎಂಎಲ್ ಸಿ ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ ಇತರರು ಭಾಗವಹಿಸಿದ್ದರು. ; -105th------- -