ಮಳೆ ಹಾನಿ ಕುರಿತು ಜಿಲ್ಲಾ ಮಟ್ಟದ ಸಭೆ: ಕ್ಷೇತ್ರಗಳಲ್ಲೇ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ- ಸಚಿವ ಎಸ್.ಟಿ ಸೋಮಶೇಖರ್… ಮೈಸೂರು,ಆ,14,2020(..): ಮೈಸೂರು ಜಿಲ್ಲೆಯ ಕ್ಷೇತ್ರವಾರು ಕ್ಷೇತ್ರವಾರು ಪ್ರತ್ಯೇಕ ಸಭೆಗಳನ್ನು ಮಾಡಿ, ಅಯಾ ಶಾಸಕರನ್ನೊಳಗೊಂಡು ಸಭೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿವಾರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ಹಾನಿ, ಕೈಗೊಂಡಿರುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆದ ಸಭೆಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿರುವ ಹಾನಿ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ಸಂಗ್ರಹಿಸಿದರು. ಜಲಾಶಯಗಳ ನೀರಿನ ಮಟ್ಟ, ಒಳಹರಿವು, ಹೊರಹರಿವಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರವಾಹ ಪರಿಹಾರ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಎಂ.ಎಲ್ಸಿ ವಿಶ್ವನಾಥ್, ಶಾಸಕರಾದ ಜಿಟಿ ದೇವೇಗೌಡ, ಹೆಚ್.ಪಿ ಮಂಜುನಾಥ್, ಹರ್ಷವರ್ಧನ್, ಅನಿಲ್ ಚಿಕ್ಕಮಾದು ಉಪಸ್ಥಿತಿ ಉಪಸ್ಥಿತರಿದ್ದರು. ಮಳೆ, ಪ್ರವಾಹ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಉಂಟಾಗುವ ಬೆಳೆಹಾನಿ ಬಗ್ಗೆ ರೈತರೇ ಸ್ವತಃ ಸಮೀಕ್ಷೆ ವರದಿ ಸಲ್ಲಿಸುವ ಆ್ಯಪ್ ಮಾಹಿತಿಯುಳ್ಳ ಕೈಪಿಡಿಯನ್ನು ಸಚಿವರಾದ ಸೋಮಶೇಖರ್ ಬಿಡುಗಡೆಗೊಳಿಸಿದರು. ಇನ್ನು ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕಳೆದ ವರ್ಷ ಹಾಗೂ ಈ ಬಾರಿ ಎಲ್ಲೆಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಮುಂದಿನ ವಾರ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಶ್ವತ ಪರಿಹಾರಕ್ಕಾಗಿ ಆಗ್ರಹಗಳು ಕೇಳಿಬರುತ್ತಿದ್ದು, ಆಯಾ ಕ್ಷೇತ್ರದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಹಾನಿ ಬಗ್ಗೆ ಸಂಪೂರ್ಣ ಲೆಕ್ಕಾಚಾರ ಆಗಿಲ್ಲ. ಈ ಬಗ್ಗೆ ಪರಿಶೀಲನೆ ಆಗುತ್ತಿದೆ. ಕಳೆದ ಬಾರಿ ಹಾನಿಗೊಳಗಾಗಿ ಪರಿಹಾರ ಸಿಗದವರ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು. ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತ ರೈತರನ್ನು ಶಾಶ್ವತವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಬಗ್ಗೆ ಜಿಲ್ಲಾಡಳಿತ ಸಿದ್ಧವಿದ್ದು, ಜನ ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಸಹಕಾರವೂ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಭೆ ಕರೆದ ವೇಳೆ ಕ್ರಮ ವಹಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಜಿಲ್ಲೆಯ ಜಲಾಶಯಗಳ ಸ್ಥಿತಿಗತಿಗಳು, ಜಲಾಶಯಗಳ ತೀರದ ಪ್ರದೇಶಗಳ ಸಮಸ್ಯೆ, ಜೀವಹಾನಿ, ಮನೆ ಹಾನಿ, ಬೆಳೆ ಹಾನಿ, ಪ್ರಾಣಿ ಹಾನಿ, ಮಳೆ-ಗಾಳಿಗೆ ವಿದ್ಯುತ್ ಪರಿಕರಗಳ ಹಾನಿಯ ವಿವರ, ಪ್ರವಾಹಕ್ಕೊಳಗಾಗಿ ತೊಂದರೆಗೀಡಾದ ಗ್ರಾಮಗಳು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸತರ ಮೂರು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್, ಮಳೆಗಾಲದಲ್ಲಿ ನೀರು ನುಗ್ಗುವ ಭಾಗಗಳಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರದೇಶದವರನ್ನು ಸ್ಥಳಾಂತರ ಮಾಡಲು ಜಾಗ ನೀಡಲು ಜಿಲ್ಲಾಡಳಿತ ಸಿದ್ಧವಿದ್ದರೂ ಸಹ ಸಾರ್ವಜನಿಕರು ಒಪ್ಪುತ್ತಿಲ್ಲ. ಜನ ಒಪ್ಪಿದರೆ ನಾವು ಜಾಗ ಕೊಡುತ್ತೇವೆ ಎಂದು ಹೇಳಿದರು. ನಂಜನಗೂಡು ಕ್ಷೇತ್ರದಲ್ಲಿ ಪ್ರವಾಹದ ನೀರು ನುಗ್ಗುವ ಸಮಸ್ಯೆ ಬಹಳವೇ ಇದ್ದು, ನಗರದ ಹೊರ ವಲಯದಲ್ಲಿ ಜಾಗ ಕೊಟ್ಟರೆ ಒಪ್ಪುತ್ತಿಲ್ಲ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ನಂಜನಗೂಡು ಶಾಸಕರಾದ ಹರ್ಷವರ್ಧನ್ ಅವರು, ಪ್ರತಿ ಬಾರಿಯೂ ಮಳೆ ಸಂದರ್ಭದಲ್ಲಿ ಕಬಿನಿ ಜಲಾಶಯದಿಂದ ಬರುವ ನೀರಿನಿಂದ ಬಹಳವೇ ತೊಂದರೆಯಾಗುತ್ತಿದ್ದು, ಪ್ರವಾಹ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಅನುದಾನ ಕೇಳುತ್ತಿದ್ದು, ಬಿಡುಗಡೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಹಣ ಬಿಡುಗಡೆಯಾಗಬೇಕು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ನೀಡಬೇಕು ಎಂದು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು. ಹುಣಸೂರು ಶಾಸಕರಾದ ಎಚ್.ಪಿ. ಮಂಜುನಾಥ್ ಮಾತನಾಡಿ, ಕಳೆದ ಬಾರಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.ಇದಕ್ಕೆ ಇರುವ ತಾಂತ್ರಿಕ ಕಾರಣಗಳು ಏನು ಎಂಬುದರ ಬಗ್ಗೆ ಗಮನಹರಿಸಬೇಕು. ಮನೆ ಹಾನಿಗೆ ಸಂಬಂಧಪಟ್ಟಂತೆ ಈಗಲೇ ವರದಿ ಕೊಡುವ ಕೆಲಸ ಆಗಬಾರದು. ಮಳೆ ಇನ್ನೂ ಇರುವುದರಿಂದ ನೆನೆದು ಭಾಗಶಃ ಹಾನಿಗೊಳಗಾದ ಮನೆಗಳು ಮತ್ತೆ ಸಂಪೂರ್ಣವಾಗಿ ಬೀಳುವ ಸಾಧ್ಯತೆ ಇರುತ್ತದೆ. ಒಮ್ಮೆ ಇವರಿಗೆ ಭಾಗಶಃ ಹಾನಿಯ ಪರಿಹಾರ ಸಿಕ್ಕರೆ, ಬಳಿಕ ಮನೆ ಸಂಪೂರ್ಣವಾಗಿ ಹಾನಿಯಾದರೆ ಪರಿಹಾರ ಸಿಗುವುದಿಲ್ಲ. ಈ ಬಗ್ಗೆಯೂ ಗಮನಹರಿಸಿ ಎಂದು ಮನವಿ ಮಾಡಿದರು. 30 ಕೋಟಿ ರೂಪಾಯಿ ಅನುದಾನ ಬಂದಿದ್ದು, ಅದರಲ್ಲಿ 14 ಕೋಟಿ 14 ಲಕ್ಷ ರೂಪಾಯಿಯನ್ನು ನಿಗಮಕ್ಕೆ ಬಿಡುಗಡೆ ಮಾಡಿದ್ದು, ಇನ್ನೂ 16 ಕೋಟಿ ರುಪಾಯಿ ಜಿಲ್ಲಾಡಳಿತ ಬಳಿ ಇದೆ. ಅಗತ್ಯ ಇರುವ ಕಡೆ ಅನುದಾನ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. : - - - – - - .