ಆನ್‍ಲೈನ್ ಸಭೆ ಮತ್ತು ಇ-ತಪಾಸಣೆಗಳಿಗೆ ಅವಕಾಶ ನೀಡಿ- ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹ… ಬೆಂಗಳೂರು,ಜು,21,2020(..): ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ವಿಧಾನ ಮಂಡಲದ ಮಹತ್ವದ ಸಮಿತಿ ತನ್ನ ಕರ್ತವ್ಯದಿಂದ ವಿಮುಖವಾಗಲು ಸಾಧ್ಯವೇ ಇಲ್ಲದಿರುವುದರಿಂದ ಸಮಿತಿಯ ಸಭೆಗಳನ್ನು ರೂಢಿಯಂತೆ ಮತ್ತು ವಿಧಾನಮಂಡಲದ ನಿಯಮಗಳಂತೆ ನಡೆಸಲು ಅಥವಾ ಆನ್‍ಲೈನ್ ಮೂಲಕ ನಡೆಸಲು ಮತ್ತು ಮೂಲಕ ಇ-ತಪಾಸಣೆಗಳಿಗೆ ಅವಕಾಶ ನೀಡಬೇಕೆಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಬೆಂಗಳೂರಿನಲ್ಲಿ ಇಂದು ಒತ್ತಾಯಿಸಿದ್ದಾರೆ. ಈ ಕುರಿತು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್, ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸನ್ನಿವೇಶದಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿರುವ ಕರ್ನಾಟಕ ವಿಧಾನಮಂಡಲ ಮತ್ತು ವಿಧಾನಮಂಡಲದ ಸಮಿತಿಗಳು ಅತ್ಯಂತ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ. ಕೋವಿಡ್-19 ರಿಂದಾಗಿ ಕರ್ನಾಟಕದಲ್ಲಿ ಒಂದು ವಾರ ಮತ್ತೊಂದು ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಲ್ಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಮಿತಿಗಳ ಸಭೆಗಳನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಯು ಸಹ ತನ್ನ ಸಭೆಗಳನ್ನು ಮುಂದಕ್ಕೆ ಹಾಕಿದೆ. ಜೂನ್-30, 2020 ರಂದು ನಡೆದ ಕೊನೆಯ ಸಭೆಯಲ್ಲಿ ಸಮಿತಿಯ ಸದಸ್ಯರ ಅಭಿಪ್ರಾಯ ಪಡೆದು ಸಮಿತಿಯ ಸಭೆಗಳನ್ನು ಒಂದು ತಿಂಗಳ ಕಾಲ ಮುಂದಕ್ಕೆ ಹಾಕಲು ನಿರ್ಣಯಿಸಲಾಗಿತ್ತು. ಇದಾದ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯನ್ನು ಸರ್ಕಾರದ ಎಲ್ಲ ಸಭೆಗಳಂತೆಯೇ ಅಂತರ್ಜಾಲ ತಾಣದ ಮೂಲಕ ಆನ್‍ಲೈನ್ ( ) ಸಭೆ ನಡೆಸಲು ಅವಕಾಶ ಕೋರಿ ದಿನಾಂಕ 1.7.2020 ರಂದು ವಿಧಾನಸಭೆಯ ಕಾರ್ಯದರ್ಶಿಯವರಿಗೆ ಕಡತದ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪ ಕಾರ್ಯದರ್ಶಿಯವರು ಸಮಿತಿಯ ನಿರ್ದೇಶನದಂತೆ ಸಲ್ಲಿಸಿದ್ದರು. ಈವರೆವಿಗೂ ಆ ಕಡತ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ತಮ್ಮ ಪತ್ರದಲ್ಲಿ ವಿಧಾನಸಭಾಧ್ಯಕ್ಷರನ್ನು ನೆನಪಿಸಿದ್ದಾರೆ. ಕರ್ನಾಟಕ ಸರ್ಕಾರದ ಇ-ಆಡಳಿತ ವ್ಯವಸ್ಥೆಯಲ್ಲಿ ( )ವಿದ್ಯುನ್ಮಾನಚಾಲಿತ ವ್ಯವಸ್ಥೆ ಹೊಂದಿರುವ ವಾಹನದ ಮೂಲಕ ತಪಾಸಣೆ ಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತಂದು ದಶಕ ಕಳೆದಿದೆ. ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇಂಥ ವಿಶಿಷ್ಟ ಸಂಕಷ್ಟದ ಸನ್ನಿವೇಶದಲ್ಲಿ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ತನ್ನ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿ ಇಲ್ಲದಂತೆ ಕಾರ್ಯನಿರ್ವಹಿಸಬೇಕು. ಸಮಿತಿಯ ಸ್ಥಳ ಪರಿಶೀಲನೆಗೆ ಅಡ್ಡಿಯುಂಟು ಮಾಡಿರುವ ವಿಧಾನಮಂಡಲ ಸಚಿವಾಲಯದ ಪ್ರಕಟಣೆ ಸಂಖ್ಯೆ: 104 ಮತ್ತು 2ನೇ ಲಾಕ್‍ಡೌನ್ ಘೋಷಣೆಯ ನಂತರ ಸಮಿತಿಯ ಸಭೆಗಳಿಗೆ ವಿಧಿಸಿರುವ ನಿರ್ಬಂಧದ ಪ್ರಕಟಣೆಯ ಸಂಖ್ಯೆ 110 ಇವುಗಳಿಂದ ನಮ್ಮ ಮಹತ್ವದ ಸಮಿತಿಯ ಕಾರ್ಯನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಾಮಾಜಿಕ ಅಂತರ ಮತ್ತು ಸದಸ್ಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಈ ಪ್ರಕಟಣೆಗಳನ್ನು ಹೊರಡಿಸಲಾಗಿದೆ ಎಂದು ಆ ಪ್ರಕಟಣೆಗಳಲ್ಲಿ ತಿಳಿಸಲಾಗಿದೆ. ಆನ್‍ಲೈನ್ ಸಭೆ ಮತ್ತು ಇ-ತಪಾಸಣೆ ಕೈಗೊಳ್ಳುವುದಕ್ಕೆ ಕೋವಿಡ್ ನಿಯಂತ್ರಣದ ಯಾವುದೇ ಕಾರಣಗಳು ಅಡ್ಡಿಯಾಗುವುದಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ. ಆದ್ದರಿಂದಾಗಿ ಇಂಥ ಸಂದರ್ಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಯು ತನ್ನ ಕರ್ತವ್ಯದಿಂದ ವಿಮುಖವಾಗಲು ಸಾಧ್ಯವಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಸಭೆಗಳನ್ನು ನಡೆಸಬೇಕು, ಅಧಿಕಾರಿಗಳಿಂದ ವಿವರಣೆ ಪಡೆಯಬೇಕು, ತಪ್ಪಿತಸ್ಥರನ್ನು ಗುರುತಿಸಬೇಕು, ತಪ್ಪಿತಸ್ಥರ ಮೇಲೆ ಕ್ರಮಗಳಾಗಬೇಕು. ಇದಕ್ಕಾಗಿ ಸಮಿತಿ ಸಭೆ ನಡೆಸಬೇಕು. ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಆಂಬ್ಯುಲೆನ್ಸ್‍ಗಳ ಕೊರತೆ ತೀವ್ರ ಪ್ರಮಾಣದಲ್ಲಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನಗಳ ವಿಳಂಬವಾಗುತ್ತಿದೆ. ಆಂಬುಲೆನ್ಸ್ ಸಿಗದೇ ಮನೆ ಬಾಗಿಲಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರಂತೂ ಹಾಸಿಗೆ ಸಿಗದೇ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ಉತ್ತಮ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಅವಶ್ಯಕತೆಗಳು ದಿನನಿತ್ಯವು ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯವಾದ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಸರಿಪಡಿಸುವ ಅವಶ್ಯಕತೆ ಇದೆ. ಕೊರೋನಾ ಪೀಡಿತರಾಗಿ ಮನೆಯಲ್ಲಿಯೇ ಪ್ರತ್ಯೇಕಿಸಲ್ಪಟ್ಟಿರುವವರಿಗೆ 8-10 ದಿನಗಳು ಕಳೆದರೂ ಕಿಟ್ ನೀಡಲಾಗಿಲ್ಲ ಎಂಬ ವರದಿಗಳಿವೆ. ಕರೋನಾ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಠಾಚಾರದ ದೂರುಗಳು ಕೇಳಿಬಂದಿದ್ದು, ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆಮಟ್ಟದ್ದವೆಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಠಾಚಾರದ ಸಂದೇಹಗಳು ಬಲವಾಗುತ್ತಿವೆ ಎಂದು ತಮ್ಮ ಪತ್ರದಲ್ಲಿ ಹೆಚ್.ಕೆ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ. : - - - - - - .