ಜಿ.ಎನ್ ಮೋಹನ್ ಸ್ಪೆಷಲ್ : ಮನದಾಳದಿ ಇಳಿದು, ಕನಸುಗಳ ಕೆದಕಿದವಳೆ… ಮನದಾಳದಿ ಇಳಿದು,ಕನಸುಗಳ ಕೆದಕಿದವಳೆ…—- ಒಂದು ಗುಲಾಬಿ ಕುಳಿತಿದ್ದ ಪ್ರೇಕ್ಷಕರ ಸಾಲಿನಿಂದ ತೂರಿ ಬಂತು. ಇದಕ್ಕೇ ಕಾದಿದ್ದರೇನೋ ಎಂಬಂತೆ ಜನ ಎದ್ದು ನಿಂತು ಗುಲಾಬಿಯನ್ನು ಅಂಗಳದೊಳಕ್ಕೆ ಎಸೆಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಒಂದು ಗುಲಾಬಿ ಹೂಗಳ ಗುಡ್ಡವೇ ಸೃಷ್ಟಿಯಾಗಿ ಹೋಗಿತ್ತು. ಆ ಹುಡುಗಿ ಗುಲಾಬಿ ಹೂಗಳ ರಾಶಿಯ ನಡುವೆ ಪುಟ್ಟ ಹಕ್ಕಿ ಮರಿಯಂತಾಗಿ ಹೋಗಿದ್ದಳು. ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡುತ್ತಿದ್ದಂತೆಯೇ ಮೊದಲ ಬಾರಿಗೆ ಆಕೆ ಕ್ರೀಡಾಂಗಣದಲ್ಲಿ ಕುಸಿದು ಕುಳಿತಳು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಆಕೆ ನದಿಯಾ ಕಮಾನ್ಸೆ. ಆಕೆಯ ಹೆಸರಿನ ಸರಿಯಾದ ಉಚ್ಛಾರ ಏನು ಎಂಬುದನ್ನು ನಾನು ಇದುವರೆಗೂ ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ನನಗೆ ಅವಳು ನದಿಯಂತೆಯೇ ಕಂಡಿದ್ದಾಳೆ. ’ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಆಕೆ ಕ್ರೀಡಾಂಗಣಕ್ಕಿಳಿದರೆ ಸಾಕ್ಷಾತ್ ನದಿಯೇ ಆಗಿ ಬದಲಾಗಿ ಹೋಗುತ್ತಾಳೆ. ಒಂದು ಜುಳು ಜುಳು ಹರಿವ ತೊರೆಯಂತೆ, ಧುಮ್ಮಿಕ್ಕಿ ಓಡುವ ಝರಿಯಂತೆ, ಪ್ರಶಾಂತ ನದಿಯಂತೆ… ನದಿಯಾ ಕಮಾನ್ಸೆ ಮನದಾಳದಿ ಇಳಿದು ಕನಸುಗಳ ಕೆದಕಿದವಳೆ ಕಂಬಿ ಒಳಗೆ ಆತುಕೊಂಡು ಅತ್ತ ಇತ್ತ ತೂಗಿದವಳೆ ನೆಲಕೆ ಕಾಲು ಸೋಕಿದಾಗ ಬಿಕ್ಕಿ ಬಿಕ್ಕಿ ಅತ್ತವಳೆ … ಕವಿತೆಯು ಯಾರ ಹಂಗೂ ಇಲ್ಲದೆ ಹರಿಯತೊಡಗಿತ್ತು. ನಾನು ಆಗ ಕವಿತೆಯ ಕೈ ಹಿಡಿದಿದ್ದೆ. ಏಕೋ ಏನೋ ಗೊತ್ತಿಲ್ಲ, ಎಲ್ಲೋ ದೂರದಿ ನಾನು ಕಂಡು ಕೇಳರಿಯದ ನೆಲದಲ್ಲಿ ಜರುಗುತ್ತಿದ್ದ ಘಟನೆಗಳು ನನ್ನನ್ನು ಕಾಡಿಬಿಡುತ್ತಿದ್ದವು. ಲೆಬನಾನಿನಲ್ಲಿ ಯುದ್ಧ, ವಿಯಟ್ನಾಂ ನಲ್ಲಿ ಯುದ್ಧರಂಗಕ್ಕಿಳಿದ ಕೋವಿ ಹೊತ್ತ ಮಹಿಳೆಯರು, ಸೋವಿಯತ್ ದೇಶ ಹಾಗು ಭಾರತದ ನಡುವೆ ಆಗುತ್ತಿದ್ದ ಒಪ್ಪಂದ, ಕ್ಯೂಬಾ ಹಲ್ಲು ಕಚ್ಚಿ ಸೆಟೆದು ನಿಂತ ರೀತಿ, ಬಾಂಬು ಸಿಡಿಸಲು ಸಿದ್ಧವಾಗಿ ನಿಂತ ಯುದ್ಧಪಿಪಾಸು ರೇಗನ್, ದಕ್ಷಿಣ ಆಫ್ರಿಕಾದಲ್ಲಿನ ಸರ್ವಾಧಿಕಾರಿ ಬೋಥಾ ಪಡೆ, ಹೀಗೆ… ಹೀಗಿರುವಾಗಲೇ ಪತ್ರಿಕೆಯ ಪುಟದಲ್ಲಿ ಪ್ರಕಟವಾಗಿದ್ದ ಆ ಚಿತ್ರ ಕಣ್ಣಿಗೆ ಬಿತ್ತು. ಗುಲಾಬಿ ಹೂಗಳ ರಾಶಿಯ ಮಧ್ಯೆ ಒಬ್ಬ ಹುಡುಗಿ… ಏನೆಂದು ಪುಟ ತಿರುಗಿಸುತ್ತಿದ್ದಂತೆಯೇ ರೊಮೇನಿಯಾದ ನದಿಯಾ ಕಮಾನ್ಸೆ ನನ್ನ ಮನದಾಳದಲ್ಲಿ ಎದ್ದು ನಿಲ್ಲತೊಡಗಿದಳು. 6 ವರ್ಷದ ಪುಟ್ಟ ಹುಡುಗಿಯೊಬ್ಬಳು ’ಹೋ’ ಎನ್ನುತ್ತಾ ಜಿಗಿದು, ಹಾರಿ, ಶಾಲೆಯ ಕೊಠಡಿಯೊಳಗೆ ತೂರಿ ಹೋದ ರೀತಿ ಅಲ್ಲಿಗೆ ಬಂದಿದ್ದ ಕೋಚ್ ಬೇಲಾ ಕರೋಲ್ಯಿ ಕಣ್ಣಿಗೆ ಬಿತ್ತು. ಕಾಲಲ್ಲಿ ಪಾದರಸ, ಮೈಯಲ್ಲಿನ ಬಳುಕು ಇಷ್ಟು ಸಾಕಾಯ್ತು. ಆರು ವರ್ಷದ ಪುಟ್ಟ ಹುಡುಗಿ ಮರುದಿನದಿಂದ ಸತತ ಎಂಟು ಗಂಟೆ ಮೈಯನ್ನು ಬಿಲ್ಲಾಗಿಸಿಕೊಳ್ಳತೊಡಗಿದಳು. ಕಾಲಿಗೆ ಬೆಕ್ಕನ್ನು ನಾಚಿಸುವ ನಡಿಗೆಯನ್ನು ಕೋಚ್ ಬೇಲಾ ಬೆಸುಗೆ ಹಾಕುತ್ತಿದ್ದರು. ಇನ್ನೆರಡು ವರ್ಷದಲ್ಲಿ ಆಕೆ ತನ್ನ ದೇಶದ ರಾಷ್ಟ್ರೀಯ ಪಂದ್ಯದಲ್ಲಿ ತಾನೂ ಒಬ್ಬ ಸ್ಪರ್ಧಿ ಎಂದು ಸಾರಿ ನಿಂತಳು. ಬಾರ್ ಗಳ ಮೇಲೆ ಜಿಗಿದು, ಕುಣಿದ ಆಕೆಗೆ ಸಿಕ್ಕಿದ್ದು 13ನೆಯ ಸ್ಥಾನ. 8 ವರ್ಷದ ಪುಟ್ಟ ಹುಡುಗಿ ಮನೆಗೆ ಹೋಗುವಾಗ ಕೋಚ್ ಬೇಲಾ ಒಂದು ಪುಟ್ಟ ಟೆಡ್ಡಿಬೇರ್ ಆಕೆಯ ಕೈಯಲ್ಲಿಟ್ಟರು. ’13 ಬೇಡ ಮಗಳೆ, ಆ ಮೂರು ತೆಗೆದು ಹಾಕು, ಉಳಿಯುವುದು ಒಂದು. ನಂಬರ್ 1’ ಎಂದರು. ಅಲ್ಲಿಂದ ಶುರುವಾಯ್ತು ಆ ಪುಟ್ಟ ಹುಡುಗಿಯ ಪಯಣ. ರೊಮೇನಿಯಾ ದಾಟಿ, ಅಂತರ ರಾಷ್ಟ್ರೀಯ ಕೂಟಕ್ಕೆ ನೆಗೆದು, ನದಿಯಾ ಚಿನ್ನ ಬಾಚತೊಡಗಿದಳು. 13ರಲ್ಲಿ 3 ಉದುರಿಹೋಗಿತ್ತು. 1976, ಜಗತ್ತು ಮಾಂಟ್ರಿಯಲ್ ಒಲಂಪಿಕ್ಸ್ ಗೆ ಸಜ್ಜಾಗುತ್ತಿತ್ತು. ಸ್ಕೋರ್ ಬೋರ್ಡ್ ಉತ್ಪಾದನೆ ಮಾಡುವ ಒಮೆಗಾ ಕಂಪನಿ ಬೋರ್ಡಿನಲ್ಲಿ ನಾಲ್ಕು ಅಂಕೆ ಇರಬೇಕಾ ಎಂದು ಕೇಳಿತು. ಒಲಂಪಿಕ್ಸ್ ಸಮಿತಿ ಗಹಗಹಿಸಿ ನಕ್ಕುಬಿಟ್ಟಿತು. ನಾಲ್ಕು ಅಂಕೆ ಅಂದರೆ ಹತ್ತು ಅಂಕ, 10.೦೦ ಒಲಂಪಿಕ್ಸ್ ಎನ್ನುವುದೇನು ಗಲ್ಲಿ ಹುಡುಗರ ಕ್ರೀಡಾಕೂಟವಾ ಅಂತ. ಸರಿ ಎಂದು ಒಮೆಗಾ ಕಂಪನಿ ಮೂರು ಅಂಕಿಯ ಸ್ಕೋರ್ ಬೋರ್ಡ್ ತಯಾರಿಸಿ ಕಳಿಸಿತು. ರೊಮೇನಿಯಾದ ಪುಟ್ಟ ಹುಡುಗಿ 14 ವರ್ಷದ ನದಿಯಾ ಕಮಾನ್ಸೆ ಬೆರಗುಗಣ್ಣು ಹೊತ್ತು ಮೊದಲ ಬಾರಿ ಒಲಂಪಿಕ್ಸ್ ಅಂಗಳಕ್ಕೆ ಹೆಜ್ಜೆ ಇಟ್ಟಳು. ಹೆಜ್ಜೆ ಇಟ್ಟಿದ್ದು ಒಳಗೆ ಬರುವಾಗ ಮಾತ್ರ. ನಂತರ ಆಕೆ ಗಾಳಿಯಲ್ಲಿ ತೇಲಿದಳು, ಹಕ್ಕಿಯಂತೆ ರೆಕ್ಕೆಯನ್ನು ಪಟಪಟಿಸುತ್ತಾ… ಹಿಂದಕ್ಕೆ ಮುಂದಕ್ಕೆ ಜೋಲಿ ಹೊಡೆಯುತ್ತಾ… ಒಮೆಗಾ ಕಂಪನಿಯ ಮೆಶಿನ್ ಗರಗರನೆ ಅಂಕ ದಾಖಲಿಸುತ್ತಾ ಹೋಯಿತು… 1,2,3… ನದಿಯಾ ಕಮಾನ್ಸೆ ಹಾಗೆ ಗಾಳಿಯಲ್ಲಿ ಹಾರಿ, ಜಿಗಿದು, ಕುಪ್ಪಳಿಸಿ ಪ್ರೇಕ್ಷಕರಿಗೆ ಬಾಗಿ ನಮಸ್ಕರಿಸಿದಾಗ ಪ್ರೇಕ್ಷಕರು ಗಾಬರಿಯಾಗಿದ್ದರು. ಏಕೆಂದರೆ ಸ್ಕೋರ್ ಬೋರ್ಡ್ ತೋರಿಸುತ್ತಿದ್ದ ಅಂಕ 1, ಕೇವಲ1. ಕೋಚ್ ಗಳು ಬೆಚ್ಚಿಬಿದ್ದಿದ್ದರು, ಇಡೀ ರೊಮೇನಿಯಾ ಬೆಚ್ಚಿ ಬಿದ್ದಿತ್ತು. ಆಗ ಮೈಕ್ ನಲ್ಲಿ ದನಿ ಕೇಳಿಬಂತು. ’ಕ್ಷಮಿಸಿ, ನಮ್ಮ ಮೆಶೀನ್ ಗೆ ಸ್ಕೋರನ್ನು ದಾಖಲಿಸಿಕೊಳ್ಳಲಾಗಿಲ್ಲ. ಆಕೆ ಪಡೆದ ಅಂಕ 10. !’ ಜನ ’ಹೋ’ ಎನ್ನುತ್ತಾ ದೀರ್ಘ ಕರತಾಡನ ಮಾಡಿದರು. ನಾಲ್ಕು ಅಂಕೆ ಅಂದರೆ 10.೦೦ ತೋರಿಸುವ ಮೆಶೀನ್ ಬೇಕಾ ಎಂದು ಕೇಳಿದಾಗ ನಕ್ಕಿದ್ದ ಒಲಂಪಿಕ್ಸ್ ಸಮಿತಿಯನ್ನು ನೋಡಿ ಈಗ ನಗುವ ಸರದಿ ಒಮೆಗಾ ಕಂಪನಿಯದಾಗಿತ್ತು. ಅದೆಲ್ಲಾ ಮುಗಿದು ಐದು ವರ್ಷಗಳಾಗಿತ್ತು. ನಾನು ಡಿಗ್ರಿ ಮೊದಲ ವರ್ಷಕ್ಕೆ ಕಾಲಿಟ್ಟಿದ್ದೆ. ಅಲ್ಲಿ ನದಿಯಾ ’ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ..’ ಎನ್ನುವಂತೆ ಒಲಂಪಿಕ್ಸ್ ನಲ್ಲಿ, ಎಲ್ಲೆಡೆಯೂ ಚಿನ್ನವನ್ನು ಬಾಚುತ್ತಾ, ಬಾಚುತ್ತಾ ಮುನ್ನಡೆದಿದ್ದಳು. ಸಾಕು ಅನ್ನಿಸಿಬಿಟ್ಟಿತ್ತೇನೋ, ಜಿಮ್ನಾಸ್ಟಿಕ್ ಗೆ ವಿದಾಯ ಹೇಳಲು ಸಜ್ಜಾದಳು. ಪರ್ಫೆಕ್ಟ್ 10 ಹುಡುಗಿ ನೀಡುತ್ತಿದ್ದ ಕೊನೆಯ ಪ್ರದರ್ಶನವನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡಿತು. ಮರುದಿನ ಎಲ್ಲಾ ಮಾಧ್ಯಮದಲ್ಲೂ ಆಕೆಯೇ ಸುದ್ದಿ. ಹೂವಿನ ರಾಶಿಯ ಮಧ್ಯೆ ನದಿಯಾ ಕಮಾನ್ಸೆ. ಇಲ್ಲಿ ನಾನು ಕವಿತೆ ಮುಂದುವರೆಸಿದೆ …. ’ಎದೆಯಲ್ಲಿ ಕಾವಾಗಿ ಚಿಗುರೊಡೆದು ಮೊಗ್ಗಾಗಿ ಒಮ್ಮೆ ನೋಡುವ ಮುನ್ನ ಮರೆಯಾಗಿ ಹೋದವಳೆ ಎದೆಯ ಕಂಬಿಯ ಮೇಲೆ ವಾಲುತ್ತಾ ನಡೆಯುತ್ತಾ ಎಷ್ಟೊಂದು ಕನಸುಗಳ ಅಳಿಸಿ ಮರೆಯಾದವಳೆ ಎದೆಯಾಳ ಗೋರಿಯಲಿ ಕಮಾನ್ಸೆ ಅನುರಣನ ಕನಸುಗಳು ಕುಡಿಯೊಡೆದು ನಿಶ್ಯಬ್ಧ ನಿರ್ಗಮನ… ಈ ಬಾರಿ ನಾನು ನಿಂತಿದ್ದು ಎಚ್ ಎಸ್ ಶಿವಪ್ರಕಾಶರ ಎದುರು. &#039;ಮಿಲರೇಪ&#039;ದಿಂದ ಸುದ್ದಿ ಮಾಡುತ್ತಾ ಅವರು ಆಗತಾನೆ ’ಮಳೆ ಬಿದ್ದ ನೆಲದಲ್ಲಿ’ ಸಂಕಲನ ಹೊರತಂದಿದ್ದರು. ನಾನೂ ಅವರು ಬಿಟಿಎಸ್ ಬಸ್ಸಿನ ಸಹ ಪ್ರಯಾಣಿಕರು. ಇಂಗ್ಲಿಷ್ ಬೋಧಿಸುತ್ತಿದ್ದ ಅವರ ಬೆನ್ನು ಬಿದ್ದೆ. ನದಿಯಾ ಕಮಾನ್ಸೆ ಬಗ್ಗೆ ಬರೆದಿರುವ ನನ್ನ ಕವನವನ್ನು ಇಂಗ್ಲಿಷಿಗೆ ಅನುವಾದ ಮಾಡಿಕೊಡಿ ಅಂತ. ನಾನು ಆ ವೇಳೆಗೆ ಅವರ ಕವಿತೆಗಳ ಮೊದಲ ಕಿವಿಗಳಲ್ಲಿ ಒಬ್ಬ. ಹಾಗಾಗಿ ಇಲ್ಲ ಎನ್ನಲಾಗದೆ ಅವರು ಅನುವಾದ ಮಾಡಿಕೊಟ್ಟೇಬಿಟ್ಟರು. ನಿಜವಾದ ಸಮಸ್ಯೆ ಶುರುವಾಗಿದ್ದು ಆಗ. ಕವನ ಬರೆದಿದ್ದಾಯ್ತು, ಬೆನ್ನು ಬಿದ್ದು ಅನುವಾದ ಮಾಡಿಸಿಕೊಂಡಿದ್ದಾಗಿತ್ತು, ಕಳಿಸುವುದು ಎಲ್ಲಿಗೆ?? ನನಗೋ ನದಿಯಾ ಕಮಾನ್ಸೆ ನನ್ನ ನೆರೆಯವಳೇನೋ ಎನ್ನುವ ಭಾವ. ಕವನ ಕಳಿಸುವುದರ ಬಗ್ಗೆ ನನಗೇನೂ ಗೊಂದಲವಿರಲಿಲ್ಲ. ಎಲ್ಲಿಗೆ ಕಳಿಸುವುದು ಎಂಬುದೇ ಪ್ರಶ್ನೆಯಾಗಿತ್ತು. ಏಕೆಂದರೆ ಆ ವೇಳೆಗೆ ನದಿಯಾ ರೊಮೇನಿಯಾ ತೊರೆದುಬಿಟ್ಟಿದ್ದಳು. ಜಗತ್ತು &#039;ರೊಮೇನಿಯಾದ ಕಮ್ಯುನಿಸ್ಟ್ ಸರ್ಕಾರ ಆಕೆಯನ್ನು ಬಾಳಲು ಬಿಡಲಿಲ್ಲ. ಹದ್ದಿನ ಕಣ್ಣಿಟ್ಟಿತು&#039; ಎಂದು ಸಾರಿ ಹೇಳಿಬಿಟ್ಟಿತ್ತು. ನಾಲ್ಕು ಕೋಳಿ ಒಂದೇ ಬಾರಿಗೆ ಕೂಗಿದಾಗ ಅದು ರಾತ್ರಿಯಾದರೂ ಬೆಳಗು ಎಂದು ನಂಬಲೇಬೇಕಾಗುತ್ತದೆ. ಆದರೆ ಆ ವೇಳೆಗೆ ಕ್ಯೂಬಾದ ಹಿಂದೆ ಬಿದ್ದಿದ್ದ ನನಗೆ, ಪ್ರತೀ ಒಲಂಪಿಕ್ಸ್ ನಡೆದಾಗಲೂ ಹೇಗೆ ಅಮೇರಿಕಾ ಹಣದ ಥೈಲಿ ಹಿಡಿದು ಕ್ಯೂಬಾದ ಕ್ರೀಡಾಪಟುಗಳ ಹಿಂದೆ ಬೀಳುತ್ತಾರೆ ಎಂದು ಗೊತ್ತಾಗಿತ್ತು. ಕ್ಯೂಬಾದ ಕ್ರೀಡಾಧಿಕಾರಿಗಳು ಒಲಂಪಿಕ್ಸ್ ನಲ್ಲಿ ಅಮೇರಿಕಾದ ಕ್ರೀಡಾಪಟುಗಳ ಮೇಲಲ್ಲ, ಡಾಲರ್ ಥೈಲಿಗಳನ್ನು ತಿರಸ್ಕರಿಸಿ, ಅವುಗಳ ಮೇಲೆ ಗೆದ್ದು ಬರಬೇಕಾದ ಪರಿಸ್ಥಿತಿ ಇತ್ತು. ಆದರೆ ನದಿಯಾಗೆ ಗೆಲ್ಲಲಾಗಲಿಲ್ಲ. ನದಿಯಾಳ ಕೋಚ್ ಗಳು ಸಾಕಷ್ಟು ಮುಂಚೆಯೇ ಅಮೇರಿಕಾ ಪಾಲಾಗಿದ್ದರು. ನದಿಯಾ ರಾತ್ರೋರಾತ್ರಿ ಹಿಮಗುಡ್ಡಗಳಲ್ಲಿ ನಡೆದು ಆಸ್ಟ್ರಿಯಾ ಸೇರಿಕೊಂಡು ಅಲ್ಲಿಂದ ಅಮೇರಿಕಾದ ತೆಕ್ಕೆಗೆ ಬಿದ್ದಳು. ಡಾಲರ್ ಥೈಲಿ ನದಿಯಾಳನ್ನು ಗೆದ್ದುಕೊಂಡಿತೋ … ಇಲ್ಲ ರೊಮೇನಿಯಾವೇ ನರಕ ಸೃಷ್ಟಿಸಿತೋ.. ’ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರೆ ಕಾಮಾಕ್ಷಿಯೇ’ ಎನ್ನುವಂತಾಗಿತ್ತು. ನಾನು ಇರಲಿ ಎಂದು ಕವನದ ಒಂದು ಪ್ರತಿಯನ್ನು &#039;ನದಿಯಾ ಕಮಾನ್ಸೆ, ರೋಮೇನಿಯಾ&#039; ಎಂದು ಇನ್ನೊಂದನ್ನು &#039;ನದಿಯಾ ಕಮಾನ್ಸೆ, ಅಮೇರಿಕಾ&#039; ಎಂದೂ ಬರೆದು ಪೋಸ್ಟ್ ಮಾಡಿಯೇಬಿಟ್ಟೆ. ಆ ನಂತರ ನನ್ನ ಕೆಲಸ ಪೋಸ್ಟ್ ಮನ್ ಬರುವುದನ್ನು ಕಾಯುತ್ತಾ ಕೂರುವುದೇ ಆಗಿಹೋಯ್ತು. ಮೊನ್ನೆ ಮತ್ತೆ ಪತ್ರಿಕೆ ತ್ರಿರುವಿ ಹಾಕುತ್ತಿದ್ದೆ. ಸಿಕ್ಕಿಹಾಕಿಕೊಂಡೇಬಿಟ್ಟಳು! ಅದೇ ನದಿಯಾ, ಜಾಕಿ ಒಳ ಉಡುಪುಗಳ ಜಾಹಿರಾತಿನಲ್ಲಿ. ನನ್ನ ಮನಸ್ಸು ಏಕೋ ವಿಲಿಗುಟ್ಟಿತು. ನೇಮಿಚಂದ್ರ ವ್ಯಾನ್ ಗೋ ನ ಬದುಕಿನ ಎಳೆ ಹಿಡಿದು ’ನೋವಿಗದ್ದಿದ ಕುಂಚ’ ಎನ್ನುವ ಬಯೋಪಿಕ್ ಕಾದಂಬರಿ ಬರೆದಿದ್ದಾರೆ. ನಾನೂ ಸಜ್ಜಾಗಿದ್ದೇನೆ.. &#039;ನದಿಯಾ&#039; ಕಾದಂಬರಿ ಅರಳಬಹುದೇನೋ……?