ಬೆಂಗಳೂರು, ಕರ್ನಾಟಕವನ್ನ ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ-ಸಿಎಂ ಬಿಎಸ್ ವೈಗೆ ಪತ್ರ ಬರೆದು ಸಲಹೆ ನೀಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್…. ಬೆಂಗಳೂರು,ಜು,7,2020(..): ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದು ಕೆಲವು ಸಲಹೆಗಳನ್ನ ನೀಡಿದ್ದಾರೆ. ಸಿಎಂ ಬಿಎಸ್ ವೈಗೆ ಪತ್ರ ಬರದಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಬೆಂಗಳೂರು, ಕರ್ನಾಟಕವನ್ನ ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ. ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ ಆಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಿ ಎಂದು ತಿಳಿಸಿದ್ದಾರೆ. ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಹಾಗೆಯೇ ಕರೋನಾ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಠಾಚಾರದ ದೂರುಗಳು ಕೇಳಿಬಂದಿದ್ದು, ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆಮಟ್ಟದ್ದವೆಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಠಾಚಾರದ ಸಂದೇಹಗಳು ಬಲವಾಗುತ್ತಿವೆ. ಕರ್ನಾಟಕ ಸರ್ಕಾರ ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವದಿಂದ ನಿರ್ವಹಿಸುತ್ತಿದ್ದು, ಆಸ್ಪತ್ರಯಲ್ಲಿ ಹಾಸಿಗೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಉತ್ತಮ ಗುಣಮಟ್ಟದ ಊಟ ಸಹಿತ ಒದಗಿಸದೇ ಇರುವ ಅಧಿಕಾರಶಾಹಿಯ ನಿರ್ಲಕ್ಷ್ಯ ವರ್ತನೆಯನ್ನು ಜನ ಶಪಿಸುತ್ತಿದ್ದಾರೆ ಎಂದು ಸಿಎಂ ಬಿಎಸ್ ವೈಗೆ ಎಚ್ಚರಿಸಿರುವ ಹೆಚ್.ಕೆ ಪಾಟೀಲ್ ಸರ್ಕಾರಕ್ಕೆ ಈ ಕೆಳಕಂಡ ಸಲಹೆಗಳನ್ನ ನೀಡಿದ್ದಾರೆ. ದಿನಾಂಕಕ್ಕೆ 40,000-50,000 ತಪಾಸಣಾ ಫಲಿತಾಂಶಗಳು ಲಭ್ಯವಾಗಿಲ್ಲ. ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ದಕ್ಷಿಣ ಕೋರಿಯಾ ರಾಷ್ಟ್ರದಲ್ಲಿ ಸಾಮೂಹಿಕ ತಪಾಸಣೆ ( )ಗಳನ್ನು ನಡೆಸಿ ತ್ವರಿತಗತಿ ( ) ತಪಾಸಣೆಯನ್ನು ಕೈಗೊಳ್ಳಲಾಯಿತು. ಈ ತಪಾಸಣೆಗಳ ಫಲಿತಾಂಶವು ಶೇ. 85 ರಷ್ಟು ನಿಖರವಾಗಿರುತ್ತದೆ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಲಭ್ಯವಾಗುತ್ತದೆ. ಈಗ ಈ ತಪಾಸಣಾ ಕಿಟ್‍ಗಳು ಅನುಮೋದಿತವಾಗಿ ಲಭ್ಯವಾಗುತ್ತಿವೆ. ಕೋವಿಡ್-19 ಮಹಾಮಾರಿಯ ಹರಡುವಿಕೆಯನ್ನು ಸಂಪೂರ್ಣ ಅರಿಯಲು ಹಾಗೂ ಸೂಕ್ತ ಕ್ರಮ ವಹಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಕಿಟ್‍ಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒದಗಿಸುವುದು ಸೂಕ್ತ. ಈ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಿ. ಇಲ್ಲದಿದ್ದರೆ ಬೆಂಗಳೂರನ್ನು, ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್‍ನಂಥ ಹೀನಾಯ ಸ್ಥಿತಿಗೆ ದೂಡಿದ್ದಕ್ಕಾಗಿ ಜನರ ಆಕ್ರೋಶಕ್ಕೆ ಬಲಿಯಾಗುತ್ತೀರಿ. ದಯವಿಟ್ಟು ತುರ್ತಾದ ಇಂಥ ಸಂದರ್ಭದಲ್ಲಿ ಸೂಕ್ತವಾದಂಥ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಂಡು ಜನರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿರಿಸಿ ಎಂದು ಹೆಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ. : – - - - - – .