ಬೇಜಾವಾಬ್ದಾರಿ : ಶೇ 90 ರಷ್ಟು ಕೀ-ಉತ್ತರ ತಪ್ಪು, ಮರು ಪ್ರವೇಶ ಪರೀಕ್ಷೆಗೆ ಮುಂದು..? ಮೈಸೂರು, ಮಾ.೨೬, ೨೦೨೪ : (.. ) 2023-24ನೇ ಸಾಲಿನ (ಜನವರಿ ಆವೃತ್ತಿ) ಪತ್ರಿಕೋದ್ಯಮ ವಿಷಯದ ಪಿ.ಹೆಚ್.ಡಿ ಪರೀಕ್ಷೆಯ - ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿ ಕೆಎಸ್‌ ಒಯು ಪ್ರಮಾದ ಎಸಗಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎನ್ ಹರೀಶ್ ಕುಮಾರ್ ಎಂಬುವವರು ಮುಕ್ತ ವಿವಿಗೆ ಪತ್ರ ಬರೆದು ಎಳೆಎಳೆಯಾಗಿ ಲೋಪವನ್ನು ಬಿಡಿಸಿಟ್ಟಿದ್ದಾರೆ. ಇದೇ ಮಾ.17 ರಂದು ಪತ್ರಿಕೋದ್ಯಮ ವಿಷಯದಲ್ಲಿ ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಆದರೆ ಪ್ರಕಟಿಸಿರುವ - (ಪತ್ರಿಕೋದ್ಯಮ ವಿಷಯ) ಕೀ-ಉತ್ತರಗಳು ತಪ್ಪಾಗಿರುವುದು ಕಂಡು ಬಂದಿದೆ. ಕೆ.ಎಸ್.ಒ.ಯು ಅಂತರ್ಜಾಲದಲ್ಲಿ ತಪ್ಪಾಗಿ ಪ್ರಕಟಿಸಿರುವ ಕೀ-ಉತ್ತರಗಳು ದೂರುದಾರ ಹರೀಶ್‌ , ಪ್ರಶ್ನೆ ಸಂಖ್ಯೆ ಸಮೇತ ಪಟ್ಟಿ ಮಾಡಿ ವಿವರ ಸಹಿತ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿಯಂತ ಉನ್ನತ ಸಂಸ್ಥೆಯೇ ಈ ರೀತಿ ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟ ಮಾಡಿರುವುದು ದಿಗ್ಧಮೆ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ 1 ಅಥವಾ 2 ಅಂಕಗಳ ವ್ಯತ್ಯಾಸದಲ್ಲಿ ಸೀಟುಗಳು ಕೈತಪ್ಪಿದ ನಿದರ್ಶನಗಳಿವೆ. ಇಂಥ ಸಂದರ್ಭಗಳಲ್ಲಿ ಇಷ್ಟೊಂದು ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿರುವುದನ್ನು ನೋಡಿದರೆ ದೊಡ್ಡ ಪ್ರಮಾದವೇ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. : ರ್ಯಾಂಕ್‌ ನೀಡುವಲ್ಲೂ ಅಕ್ರಮ ಆರೋಪ. ಪಟ್ಟಿ ರದ್ಧತಿಗೆ ಆಗ್ರಹಿಸಿ ಕುಲಪತಿಗೆ ಪತ್ರ. ಆದ್ದರಿಂದ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿ ಬೇಜಾವಾಬ್ದಾರಿ ತೋರಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಸರಿ ಕೀ-ಉತ್ತರಗಳನ್ನು ಪ್ರಕಟಿಸಿ ನಂತರ ಪ್ರವೇಶಾತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು ಅಥವಾ ಮರು ಸಿ.ಇ.ಟಿ ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ. : ಮುಕ್ತ ವಿವಿ ಪತ್ರಿಕೋಧ್ಯಮ ವಿಭಾಗದ ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿನ ಎಡವಟ್ಟಿನ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಕುಲಪತಿ ಪ್ರೊ.ಶರಣಪ್ಪ ಹಲಸೆ, ವಿವಿ ಅಂತರ್ಜಾಲದಲ್ಲಿ ಪ್ರಕಟಿಸಿರುವ ಕೀ – ಉತ್ತರಗಳು ಲೋಪದಿಂದ ಕೂಡಿರುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ತಪ್ಪೆಸಗಿರುವುದು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಜತೆಗೆ ಅಗತ್ಯವಾದಲ್ಲಿ ಮರು ಪ್ರವೇಶ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. : , , ,