ಪದಗ್ರಹಣ ಕಾರ್ಯಕ್ರಮಕ್ಕೆ ಸಿಎಂ ಅನುಮತಿ: ಪೊಲೀಸರು ಅಡಚಣೆ ಮಾಡುವಂತಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರು,ಜು,1,2020(..): ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ ಪ್ರತಿಜ್ಞಾಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅನುಮತಿ ನೀಡಿದ್ದು, ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು… ನಾಳೆ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಕರೆಗಳು ಬಂದಿವೆ. ಮುಖ್ಯಮಂತ್ರಿಗಳೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅನುಮತಿ ಕೊಟ್ಟಿದ್ದಾರೆ. ನಾನು ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನಿಮ್ಮ ನಿಮ್ಮ ಪ್ರದೇಶಗಳಲ್ಲೇ ಇದ್ದು ಸುದ್ದಿ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಿ. ನಾನು ಆಮಂತ್ರಣ ನೀಡಿರುವವರನ್ನು ಬಿಟ್ಟು ಇನ್ಯಾರು ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿ.ಕೆ ಶಿವಕುಮಾರ್ ಕಿವಿಮಾತು ಹೇಳಿದರು. ನಮ್ಮ ಜತೆ ನೀವು ಟಿವಿ ಹಾಗೂ ಜೂಮ್ ಮೂಲಕ ನಿಮ್ಮ ಪ್ರದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಾವೆಲ್ಲಾ ಸಹಕಾರ ನೀಡಬೇಕು. ಕಾರ್ಯಕರ್ತರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಎಲ್ಲ ಮಠ ಹಾಗೂ ಸಮುದಾಯದ ಗುರು ಹಿರಿಯರು ಆಶೀರ್ವಾದ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಜನರು ಕೂಡ ನಾವು ನೀಡಿರುವ ಸಂಖ್ಯೆಗೆ ಮಿಸ್ ಕಾಲ್ ನೀಡಿ ಆ ಮೂಲಕ ಆಶೀರ್ವಾದ ನೀಡಬಹುದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಕಾರ್ಯಕ್ರಮಕ್ಕೆ ಜನರ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಡಿ,ಕೆ ಶಿವಕುಮಾರ್, ನಾವು ಇಲ್ಲಿಗೆ ಬರುವವರಿಗೆ ಪಾಸ್ ನೀಡಿದ್ದು, ನನ್ನ ಮನೆಯಿಂದ ಇಬ್ಬರು ಮಾತ್ರ ಬರುತ್ತಿದ್ದೇವೆ. ಕೆಲವು ನಾಯಕರು, ಹೊರ ರಾಜ್ಯದಿಂದ ನಾಲ್ಕೈದು ಜನ ಹಾಗೂ ಮಾಧ್ಯಮದವರಿಗೆ ಮಾತ್ರ ಈ ಪಾಸ್ ನೀಡಲಾಗಿದೆ. ಅವರು ಮಾತ್ರ ಇಲ್ಲಿಗೆ ಬರಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ಜನ ಸೇರುವುದಿಲ್ಲ ಎಂದರು. : - – - - -