ಬ್ರಾಹ್ಮಣ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ- ನೂತನ ಕಚೇರಿ, ಲಾಂಛನ ಉದ್ಘಾಟನೆ ಬಳಿಕ ಸಿಎಂ ಬಿಎಸ್ ವೈ ಹೇಳಿಕೆ…. ಬೆಂಗಳೂರು,ಜೂ,10,2020(..): ಬ್ರಾಹ್ಮಣ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಯ ಲಾಂಛನ ಮತ್ತು ಜಾಲತಾಣ ವನ್ನು ಉದ್ಘಾಟನೆ ‌ಮಾಡಿದರು. ಈ ಸಂದರ್ಭದಲ್ಲಿ ‌ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ‌ಮೂರ್ತಿ ಸಚಿವರಾದ ಆರ್ ಅಶೋಕ್. ರಮೇಶ್ ಜಾರಕಿಹೊಳಿ. ಅಶ್ವಥ್ ನಾರಾಯಣ್. ಸಂಸದರಾದ ತೇಜಸ್ವಿ ಸೂರ್ಯ ರಾಜಕೀಯ ಕಾರ್ಯದರ್ಶಿ ಗಳಾದ ವಿಶ್ವನಾಥ್ ‌ಶಂಕರ್ ಗೌಡ ಪಾಟೀಲ್ ಶಾಸಕರಾದ ರಾಜು ಗೌಡ ರಾಮದಾಸ್ ರವಿಸುಬ್ರಮಣ್ಯ. ಅರ್.ವಿ ದೇಶಪಾಂಡೆ ಮುಖಂಡರಾದ ಎಂಟಿಬಿ‌ ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿ, ಲಾಂಛನ ಹಾಗೂ ಜಾಲತಾಣವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಯಾವುದೇ ಒಂದು ಸಮುದಾಯವನ್ನು ಸಾರಾಸಗಟಾಗಿ ಮುಂದುವರೆದ ಸಮುದಾಯ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಲ್ಲೂ ಮುಂದುವರೆದವರು ಮತ್ತು ಹಿಂದುಳಿದವರು ಇರುತ್ತಾರೆ. ಅದೇ ರೀತಿ ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರೆದ ಸಮುದಾಯ ಎಂದು ಗುರುತಿಸಿದ್ದರೂ, ಆರ್ಥಿಕವಾಗಿ ಅಶಕ್ತರಾಗಿರುವ ಹಲವಾರು ಮಂದಿ ಈ ಸಮುದಾಯದಲ್ಲಿದ್ದಾರೆ. ಅಂತಹವರ ಅಭ್ಯುದಯಕ್ಕಾಗಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು. ದೇಶದ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯದವರ ಕೊಡುಗೆ ಉಲ್ಲೇಖಾರ್ಹವಾದುದು. ವಿಶೇಷವಾಗಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯಲ್ಲಿ ಈ ಸಮುದಾಯದ ಸಾಧನೆ ಅದ್ವಿತೀಯವಾದುದು ಎಂದು ಶ್ಲಾಘಿಸಿದರು. ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರಂತಹ ಗುರುಶ್ರೇಷ್ಠರ ತತ್ವ ಹಾಗೂ ಆದರ್ಶಗಳ ಹಾದಿಯಲ್ಲಿ ನಡೆದು ಸಮಾಜ ಒಳಿತನ್ನು ಕಂಡಿದೆ. ವೇದೋಪನಿಷತ್ತುಗಳನ್ನು ಅಭ್ಯಸಿಸುವ ಮೂಲಕ ಆಧ್ಯಾತ್ಮಿಕತೆಯನ್ನು ಮನುಕುಲಕ್ಕೆ ವಿಪ್ರ ಸಮಾಜ ಭೋದಿಸುತ್ತಾ ಬಂದಿದೆ. ಬ್ರಾಹ್ಮಣ ಸಮುದಾಯವು ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಅಪೂರ್ವ ಕೊಡುಗೆ ನೀಡಿದೆ. ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಸಿಎಂ ಬಿಎಸ್ ವೈ ನುಡಿದರು. ಅಶಕ್ತರಾದ ಬ್ರಾಹ್ಮಣರು ಆರ್ಥಿಕವಾಗಿ ಸಶಕ್ತರಾಗಲು ಮಂಡಳಿಯ ವತಿಯಿಂದ ಅನೇಕ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸಲು ಯೋಜನೆಗಳು ಸಹಕಾರಿಯಾಗಲಿದೆ. ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಅನಾಥ, ನಿರಾಶ್ರಿತ ಅಂಗವಿಕಲ / ವಿಧವೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ, ವೃದ್ಧಾಶ್ರಮ, ವೈದ್ಯಕೀಯ ತಪಾಸಣೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶ ಸ್ವಾಗತಾರ್ಹ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಸಮುದಾಯದವರಿಗಾಗಿ ಸಾಮೂಹಿಕ ವಿವಾಹ, ಉಪನಯನ ಆಯೋಜನೆ ಸೇರಿದಂತೆ ಯುವ ಪೀಳಿಗೆಯ ಸಂಘಟನೆಗೆ ಅಭಿವೃದ್ಧಿ ಉತ್ಸವಗಳನ್ನು ಆಯೋಜಿಸುವುದು ಇತ್ಯಾದಿ ಪ್ರಶಂಸಾರ್ಹ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವಕ-ಯುವತಿಯರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ನೀಡುವ ಯೋಜನೆಗಳಿವೆ. ಈ ಎಲ್ಲ ಯೋಜನೆಗಳು ಸಮುದಾಯದವರ ಉನ್ನತಿಗಾಗಿ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಿಎಂ ಬಿಎಸ್ ವೈ ಸಲಹೆ ನೀಡಿದರು. ಕರ್ನಾಟಕದಲ್ಲಿ ಬ್ರಾಹ್ಮಣರ ಜನಸಂಖ್ಯೆ ಅಂದಾಜು ಶೇಕಡಾ 3 ರಷ್ಟಿದ್ದು, ಬ್ರಾಹ್ಮಣ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದ ಮೂರ್ತಿ ಅವರ ನೇತೃತದಲ್ಲಿ ಸಮುದಾಯ ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂದು ಭಾವಿಸಿದ್ದೇನೆ. 20. ಮಂಡಳಿಯ ನೂತನ ಕಚೇರಿ ಹಾಗೂ ಜಾಲತಾಣ ಬ್ರಾಹ್ಮಣ ಸಮುದಾಯಕ್ಕೆ ಉಪಯುಕ್ತವಾಗಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಬಿಎಸ್ ವೈ ಶುಭ ಹಾರೈಸಿದರು. : – - - - -