ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ- ಸಂಸದೆ ಸುಮಲತಾ ಅಂಬರೀಶ್. ನವದೆಹಲಿ,ಮಾರ್ಚ್,18,2024(..):ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್​ ಕೊಡಲು ನಾನು ಕೇಳಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಮಾತುಕತೆ ಮುಕ್ತಾಯವಾಗಿದೆ. ಮಂಡ್ಯದ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್​ ಕೊಡಲು ನಾನು ಕೇಳಿದ್ದೇನೆ. ಇಂದು ಸಂಜೆ ಸಭೆ ನಡೆಯಲಿದೆ. ಈ ಸಭೆಯ ನಂತರ ನಿರ್ಧಾರವಾಗಲಿದೆ ಎಂದರು. ಮೋದಿಯವರು ನನಗೆ ಭರವಸೆ ನೀಡಿದ್ದಾರೆ. ನನ್ನ ಮುಂದಿನ ನಿರ್ಧಾರವನ್ನ ಕ್ಷೇತ್ರಕ್ಕೆ ತೆರಳಿ ನಮ್ಮ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ. ನನ್ನ ಸಂಸತ್ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು. ನಾನು ಚಿಕ್ಕಬಳ್ಳಾಪುರದಿಂದ ಈ ಬಾರಿಯ ಚುನಾವಣಾ ಕಣಕ್ಕಿಳಿಯುತ್ತೇನೆ ಎಂಬುದು ಕೇವಲ ಉಹಾಪೋಹ ಮಾತ್ರ. ಅಮಿತ್ ಶಾ ಭೇಟಿ ಬಳಿಕ ಮುಂದಿನ ತೀರ್ಮಾನವನ್ನು ನಾನು ಕೈಗೊಳ್ಳುತ್ತೇನೆ. ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು. : - – – – - .