ಯಶಸ್ವಿ ನಾಯಕ: ಧೋನಿ ದಾಖಲೆ ಮುರಿದ ಕೊಹ್ಲಿ ಮುಂಬೈ, ಸೆಪ್ಟೆಂಬರ್ 03, 2019 (..): ಭಾರತ ಟೆಸ್ಟ್ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 257 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಕೊಹ್ಲಿಯವರ ವರ್ಣರಂಜಿತ ಕ್ರಿಕೆಟ್ ಅಧ್ಯಾಯಕ್ಕೆ ಹೊಸ ಗರಿ ಸೇರ್ಪಡೆಯಾದಂತಾಗಿದೆ. ಕಿಂಗ್‌ಸ್ಟನ್‌ನಲ್ಲಿ ಭಾರತ ಸಾಧಿಸಿದ ಗೆಲುವು ಕೊಹ್ಲಿ ನಾಯಕರಾಗಿ ಭಾರತಕ್ಕೆ ತಂದುಕೊಟ್ಟ 28ನೇ ಗೆಲುವಾಗಿದೆ. ಸಾಂಪ್ರದಾಯಿಕ ಕ್ರಿಕೆಟ್‌ನಲ್ಲಿ ಭಾರತದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ (27) ಅವರ ದಾಖಲೆಯನ್ನು ಕೊಹ್ಲಿ ಅಳಿಸಿಹಾಕಿದರು. ಧೋನಿ 60 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ ಕೇವಲ 48 ಪಂದ್ಯಗಳಲ್ಲಿ ಈ ದಾಖಲೆ ಸ್ಥಾಪಿಸಿದರು.