ಉಗ್ರರ ದಾಳಿ ಭೀತಿ ಹಿನ್ನೆಲೆ: ಚಾಮುಂಡಿ ಬೆಟ್ಟ ಸೂಕ್ಷ್ಮ ಪ್ರದೇಶ, ರಾತ್ರಿ 9ರ ನಂತರ ವಾಹನ ಸಂಚಾರ ನಿರ್ಬಂಧ ಮೈಸೂರು, ಆಗಸ್ಟ್ 18, 2019 (..): ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟವನ್ನೂ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ದಸರಾ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಚಾಮುಂಡಿ ಬೆಟ್ಟದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದ್ದು, ರಾತ್ರಿ 9 ಗಂಟೆಯ ನಂತರ ಬೆಟ್ಟದತ್ತ ತೆರಳುವ ವಾಹನಗಳನ್ನು ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ನೈಟ್ ರೌಂಡ್ಸ್ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸರು ರಾತ್ರಿ 9 ಗಂಟೆಯ ನಂತರ ಬೆಟ್ಟಕ್ಕೆ ತೆರಳುವ ಪ್ರತಿಯೊಬ್ಬರ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಮಾತ್ರವೇ ರಾತ್ರಿ 9 ಗಂಟೆಯ ನಂತರ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.