ತಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆ: ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ನೆರೆ ಸಂತ್ರಸ್ತರಿಂದ ಆಕ್ರೋಶ… ಉತ್ತರಕನ್ನಡ,ಆ,13,2019(..) ತಮ್ಮ ಮನವಿಗೆ ಸರಿಯಾಗಿ ಸ್ಪಂದಿಸದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ದ ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ನಿನ್ನೆಯಷ್ಟೆ ಬೆಳಗಾವಿಯಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನ ನೆರೆ ಸಂತ್ರಸ್ತ ಮಹಿಳೆಯರು ತರಾಟೆ ತೆಗೆದುಕೊಂಡು ನಿಮಗೆ ವೋಟು ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಮುಂಡಗೂಡ ತಾಲ್ಲೂಕಿನ ಕಾತೂರು ಗ್ರಾಮಸ್ಥರು ಸಂಸದ ಅನಂತ್ ಕುಮಾರ್ ಹೆಗಡೆ ಅವರು ಕಾರು ತಡೆದು ತರಾಟೆ ತೆಗೆದುಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ಡ್ಯಾಂ ಒಡೆದು ಕಾತೂರಿನ ಕೃಷಿಭೂಮಿ ಮುಳುಗಡೆಯಾಗಿತ್ತು. ಈ ನಡುವೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಶಿರಸಿಯಿಂದ ಮುಂಡಗೊಡಕ್ಕೆ ತೆರಳುತ್ತಿದ್ದ ವೇಳೆ ಕಾತೂರು ಬಳಿ ನೆರೆ ಸಂತ್ರಸ್ತರು ಸಂಸದರ ಕಾರು ತಡೆದು ಮುಳುಗಿರುವ ಕೃಷಿಭೂಮಿ ಪರಿಶೀಲನೆಗೆ ಆಗ್ರಹಿಸಿದರು. ಆದರೆ ಅನಂತ್ ಕುಮಾರ್ ಹೆಗಡೆ ಅವರು ಸರಿಯಾಗಿ ಸ್ಪಂದಿಸದಿದ್ದಕ್ಕೆ ಸ್ಥಳೀಯರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : – - - -