ನಟಿ ಕಾಜಲ್ ಅಗರ್ ವಾಲ್ ರನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಕಳೆದುಕೊಂಡ ಅಭಿಮಾನಿ ಚೆನ್ನೈ:ಆ-2:(..) ನಟ-ನಟಿಯರ ಮೇಲಿನ ಹುಚ್ಚು ಅಭಿಮಾನ ಅದೆಂತಹ ಅವಾಂತರಗಳನ್ನು, ಪೇಚಿಗೆ ಸಿಲುಕುವ ಸ್ಥಿಗೆ ತರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರ ನಟಿ ಕಾಜಲ್ ಅಗರ್ ವಾಲ್ ಅವರನ್ನು ಭೇಟಿಯಾಗಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಗಳನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆಬಂದಿದೆ. ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರನಾಗಿರುವ ಪ್ರದೀಪ್​ ಕುಮಾರ್(27) ನಟಿ ಕಾಜಲ್ ಅಗರ್ ವಾಲ್ ರ ದೊಡ್ಡ ಅಭಿಮಾನಿ. ಆಕೆಯನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕು ಎಂಬ ಆಸೆಯಿಂದ 75 ಲಕ್ಷ ವಂಚನೆಗೊಳಗಾಗಿದ್ದಾರೆ. ಕಾಜಲ್ ರನ್ನು ಭೇಟಿಯಾಗಬೇಕೆಂಬ ತನ್ನ ಮನದಾಸೆಯನ್ನು ಪ್ರದೀಪ್ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಅದಕ್ಕೆ ಕೆಲವು ಸ್ನೇಹಿತರು ಸಿನಿಮಾ ತಾರೆಯನ್ನು ಭೇಟಿ ಮಾಡಿಸುವ ವೆಬ್​ಸೈಟ್​ವೊಂದರಲ್ಲಿ ಹೆಸರನ್ನು ರಿಜಿಸ್ಟರ್​ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಆತ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಿದ್ದ. ರಿಜಿಸ್ಟರ್​ ಮಾಡಿದ 10 ನಿಮಿಷದಲ್ಲೇ ವ್ಯಕ್ತಿಯೊಬ್ಬ ಪ್ರದೀಪ್​ಗೆ ಕರೆ ಮಾಡಿ ಈತನ ಇತ್ತೀಚೆಗಿನ ಕೆಲವು ಫೋಟೋಗಳು ಹಾಗೂ ಐಡಿ ಪ್ರೂಫ್​ ಅನ್ನು ಪಡೆದುಕೊಂಡಿದ್ದ. ನಂತರ ಸರ್ವೀಸ್ ಚಾರ್ಜ್​ ಎಂದು 50 ಸಾವಿರ ನೀಡಬೇಕು ಎಂದು ತಿಳಿಸಿದ್ದ. ಮೊದಲ ಕಂತಿನಲ್ಲಿ 25 ಸಾವಿರ ನೀಡಬೇಕು ಎಂದು ಸೂಚಿಸಿದ್ದ. ಅದರಂತೆ ಪ್ರದೀಪ್​ ಕುಮಾರ್​ ಹಣ ವರ್ಗಾವಣೆ ಮಾಡಿದ್ದ. ಹಣ ಪಡೆದ ನಂತರ ನಟಿಯನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದ. ಆ ನಂತರವೂ ಪ್ರದೀಪ್​ನಿಂದ ಹಲವು ಬಾರಿ ಹಣ ಪಡೆದಿದ್ದ. ಆದರೆ, ನಟಿಯನ್ನು ಭೇಟಿ ಮಾಡಿಸಲೇ ಇಲ್ಲ. ಪ್ರದೀಪ್​ ಉದ್ಯಮಿಯೊಬ್ಬರ ಮಗ ಎಂಬುದು ತಿಳಿಯುತ್ತಿದ್ದಂತೆ. ವಂಚಕರು ಪ್ರದೀಪ್​ ಕಳುಹಿಸಿದ್ದ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಲು ಪ್ರಾರಂಭಿಸಿದರು. ಆ ನಂತರ ಪ್ರದೀಪ್​ ಹಂತ ಹಂತವಾಗಿ 75 ಲಕ್ಷ ರೂ. ಹಣವನ್ನು ವಂಚಕರಿಗೆ ನೀಡಿದ್ದ. ವಂಚಕರ ಕಾಟ ತಾಳಲಾರದೇ ಪ್ರದೀಪ್​ ಮನೆಬಿಟ್ಟು ಹೋಗಿ ಕೋಲ್ಕತ್ತಾಗೆ ತೆರಳಿ ಅಲ್ಲಿಂದ ತನ್ನ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಗಾಬರಿಯಾದ ಪ್ರತೀಪ್ ತಂದೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರದೀಪ್​ನನ್ನು ಪತ್ತೆ ಹಚ್ಚಿ ವಾಪಸ್​ ಕರೆತಂದಿದ್ದಾರೆ. ಪ್ರದೀಪ್​ನನ್ನು ವಿಚಾರಣೆ ನಡೆಸಿದಾಗ ಆತ ನಟಿ ಕಾಜಲ್ ಅಗರ್ ವಾಲ್ ಭೇಟಿ ಮಾಡಲು ಪ್ರಯತ್ನಿಸಿ ವಂಚನೆಗೊಳಗಾಗಿರುವುದು ತಿಳಿದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚೆನ್ನೈನ ಅಶೋಕ್​ ನಗರ ಪ್ರದೇಶದ ಲಾಡ್ಜ್​ವೊಂದರಿಂದ 37 ವರ್ಷದ ಶರವಣಕುಮಾರ್​ ಅಲಿಯಾಸ್​ ಗೋಪಾಲಕೃಷ್ಣನ್​ ಎಂಬಾತನ್ನು ಬಂಧಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆಯುತ್ತಿದ್ದ ನಕಲಿ ಆನ್​ಲೈನ್​ ವಂಚಕರ ಜಾಲವನ್ನು ಪೊಲೀಸರು ಪತ್ತೆಮಾಡಿ, ಬಂಧಿಸಿದ್ದಾರೆ.