ಬಾಲಿವುಡ್ ತೊರೆದ ದಂಗಗಲ್ ಬೆಡಗಿ ಝೈರಾ ನಿರ್ಧಾರಕ್ಕೆ ರವೀನಾ ಟಂಡನ್ ಗರಂ: ಉಳಿದವರು ಹೇಳಿದ್ದೇನು? ಮುಂಬೈ:ಜುಲೈ-1:(..) ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ದಂಗಲ್ ಚಿತ್ರದ ಖ್ಯಾತಿಯ ನಟಿ ಝೈರಾ ವಾಸೀಮ್ ಹೇಳಿಕೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಗರಂ ಆಗಿದ್ದು, ಕೇವಲ ಎರಡು ಸಿನಿಮಾಗಳನ್ನು ಮಾಡಿ ಚಿತ್ರೋದ್ಯಮದ ಬಗ್ಗೆ ನೆಗಟೀವ್ ಅಭಿಪ್ರಾಯ ಹೇಳುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರರಂಗ ತನಗೆ ಸಂತಸ ತಂದಿಲ್ಲ. ಇಲ್ಲಿ ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡಲಾಗುತ್ತದೆ. ಹೀಗಾಗಿ ಚಿತ್ರರಂಗದಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ಝೈರಾ ಸುದೀರ್ಘವಾಗಿ ಸಾಮಾಜಿಕ ಜಾಲತಾಣಗಲಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ರವೀನಾ, ಎರಡು ಸಿನಿಮಾಗಳಿಗೇ ಚಿತ್ರೋದ್ಯಮದ ಮೇಲೆ ನೆಗಟೀವ್ ಅಭಿಪ್ರಾಯ ಬೆಳೆಸಿಕೊಂಡವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಷ್ಟವಿಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಹೊರಟು ಹೋಗಬಹುದು. ಆದರೆ ಸಾಮಾಜಿಕ ಮಾಧ್ಯಮದ ಮೂಲಕ ಇಂತಹ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಚಿತ್ರೋದ್ಯಮ ಇಂತಹವರಿಗೆ ಇಷ್ಟವಿಲ್ಲದಿದ್ದರೆ ಸ್ವತಂತ್ರವಾಗಿ ಹೊರಹೋಗಬಹುದು. ಆದರೆ ಈ ರೀತಿ ಚಿತ್ರೋದ್ಯಮದ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟಾಗುವಂತೆ ಹೇಳಿಕೆ ನೀಡಬಾರದು ಎಂದು ಟ್ವೀಟ್ ಮಾಡಿದ್ದಾರೆ. ಝೈರಾ ನಿರ್ಧಾರಕ್ಕೆ ಹಲವು ನಟ-ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಆಕೆಗೆ ಬೆಂಬಲವನ್ನು ನೀಡಿದ್ದಾರೆ. ಈ ಬಗ್ಗೆ ನಟ ಸಿದ್ಧಾರ್ಥ್, ಇದು ನಿಮ್ಮ ಜೀವನ. ನಿಮಗಿಷ್ಟ ಬಂದಂತೆ ಮಾಡಿ. ಭವಿಷ್ಯದಲ್ಲಿ ನಿಮಗೆ ಎಲ್ಲವೂ ಒಳಿತೇ ನಡೆಯಬೇಕೆಂದು ಬಯಸುತ್ತೇನೆ. ಆದರೆ ನನ್ನ ಅಭಿಪ್ರಾಯದಲ್ಲಿ ಕಲೆ, ವೃತ್ತಿ ನಮ್ಮ ಜೀವನದ ಒಂದು ಭಾಗ. ಇವುಗಳಲ್ಲಿ ಧರ್ಮದ ವಿಚಾರ ತರಬಾರದು. ಧರ್ಮಕ್ಕೂ ನಮ್ಮ ವೃತ್ತಿಗೂ ಸಂಬಂಧವಿಲ್ಲ ಎಂದಿದ್ದಾರೆ. ನಟಿ ನಗ್ಮಾ ಟ್ವೀಟ್ ಮಾಡಿ, ಝೈರಾ ಚಿಕ್ಕ ಮಗು. ಆಕೆ ಭವಿಷ್ಯದಲ್ಲಿ ಯಾವ ರೀತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಒಳ್ಳೆಯ ಭವಿಷ್ಯ ಇರುತ್ತದೆ. ಆಕೆ ಧೈರ್ಯಶಾಲಿ. ಆಕೆಯ ಧೈರ್ಯವನ್ನು ಮೆಚ್ಚಿಕೊಂಡು ಇಂತಹ ಸಮಯದಲ್ಲಿ ಬೆಂಬಲಕ್ಕೆ ನಿಲ್ಲಬೇಕು ಎಂದಿದ್ದಾರೆ. ಇನ್ನು ಝೈರಾ ಹಂಚಿಕೊಂಡ ಪೋಸ್ಟ್ ಸಂಪೂರ್ಣ ನಾನು ಓದಿದೆ. ಈಗ ಯುವಜನತೆಯ ಆಲೋಚನಾ ವಿಧಾನ ಕಲುಷಿತವಾಗುತ್ತಿದೆ. ಇಂತಹವರಿಗೆ ಝೈರಾ ನಿರ್ಧಾರ ಒಂದು ಉತ್ತರ ಆಗಬೇಕೆಂದು ಬಯಸುತ್ತಿದ್ದೇನೆ. ಝೈರಾ ಆಲೋಚನೆಗಳನ್ನು ಅನುಸರಿಸುವವರಲ್ಲಿ ನಾನು ಒಬ್ಬಳು ಎಂದು ಧೈರ್ಯವಾಗಿ ಹೇಳುತ್ತಿದ್ದೇನೆ ಎಂದು ನಟಿ ತನುಶ್ರೀ ದತ್ತಾ ತಿಳಿಸಿದ್ದಾರೆ. , , ,