ಬಿಹಾರದ 2,100 ಬಡ ರೈತರ ಸಾಲ ತೀರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈ:ಜೂ-13:(..) ಬಾಲಿವುಡ್ ಮೆಘಾ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹಲವಾರು ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಗಾಗ ಅನ್ನದಾತ ರೈತನಿಗೆ ಸಹಾಯ ಮಾಡುವುದೂ ಕೂಡ ಅವರ ಸಮಾಜಮುಖಿ ಕಾರ್ಯಗಳಲ್ಲಿ ಒಂದು. ಇತ್ತೀಚೆಗೆ ಅಮಿತಾಬ್, ಬಿಹಾರದ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದು, ಜೊತೆಗೆ ಮಗ ಅಭಿಷೇಕ್ ಹಾಗೂ ಮಗಳು ಶ್ವೇತಾ ಜೊತೆಯಿರುವ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾತು ನೀಡಿದ್ದನ್ನು ಪೂರ್ಣಗೊಳಿಸಿದ್ದೇನೆ. ಸಾಲ ಹೊಂದಿದ 2,100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಿದ್ದರು. ಅದಕ್ಕೂ ಮೊದಲು 350 ರೈತರ ಸಾಲವನ್ನು ಪಾವತಿಸಿದ್ದರು. .