‘ ವಿಶ್ವವಾಣಿ’ ಆಯ್ತು, ಇದೀಗ ‘ ಟ್ರೋಲ್ ಮಗಾ ‘ ಸರದಿ……. ಬೆಂಗಳೂರು, ಮೇ 30, 2019 :(.. ) ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಫೇಕ್ ನ್ಯೂಸ್ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಪತ್ರಿಕೆಯೊಂದರ ಸಂಪಾದಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ ಮತ್ತೆ ಅಂಥದ್ದೆ ಒಂದು ದೂರನ್ನು ಜೆಡಿಎಸ್ ನೀಡಿದೆ.ಈ ಬಾರಿ ‘ ಟ್ರೋಲ್ ಮಗಾ ‘ ಫೇಸ್ ಬುಕ್ ಪೇಜ್ ನ ಅಡ್ಮಿನ್ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ. ನಗರದ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಏನಿದು ಘಟನೆ : ಜೆಡಿಎಸ್ ಮುಖಂಡರ ಬಗ್ಗೆ ‘ಟ್ರೋಲ್ ಮಗಾ‘ ಫೇಸ್‌ಬುಕ್ ಪುಟದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಅದರ ಅಡ್ಮಿನ್ ವಿರುದ್ಧ ದೂರು ನೀಡಲಾಗಿದೆ. ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೆಡಿಎಸ್ ಮುಖಂಡ ಎಚ್‌.ಡಿ. ದೇವೇಗೌಡ (ಮಾಜಿ ಪ್ರಧಾನಿ ), ಎಚ್‌.ಡಿ.ಕುಮಾರಸ್ವಾಮಿ ( ಮುಖ್ಯಮಂತ್ರಿ ), ಎಚ್.ಡಿ.ರೇವಣ್ಣ ( ಸಚಿವ ) ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ‘ಟ್ರೋಲ್‌ ಮಗಾ’ ಪುಟದಲ್ಲಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ಕುಮಾರ್ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದೂರು ದಾಖಲಿಸಲಾಗಿತ್ತು. ಚುನಾವಣೆ ಸೋಲಿನಿಂದ ಕಂಗೆಟ್ಟ ಸಿಎಂ ಪುತ್ರ ನಿಖಿಲ್ , ಮೈಸೂರಿನ ಹೋಟೆಲ್ ಒಂದರಲ್ಲಿ ಕುಡಿದು ರಂಪಾಟ ಮಾಡಿದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಇದು ಸುಳ್ಳು ಸುದ್ಧಿ, ಕುಟುಂಬವನ್ನು ತೇಜೋವಧೆ ಮಾಡುವ ಸಲುವಾಗಿ ಸುದ್ದಿ ಪ್ರಕಟಿಸಲಾಗಿದೆ ಎಂದು ಪತ್ರಿಕೆ ವಿರುದ್ಧ ಜೆಡಿಎಸ್ ಪ್ರಕರಣ ದಾಖಲಿಸಿತ್ತು ಎಂಬುದನ್ನು ಈ ವೇಳೆ ಸ್ಮರಿಸಬಹುದು. — ‘ ’ . ’ . ‘ ’ “”