ಸ್ವಕ್ಷೇತ್ರಕ್ಕೆ ಭೇಟಿ: ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನರೇಂದ್ರ ಮೋದಿ.. ವಾರಣಾಸಿ,ಮೇ,27,2019(..): ಲೋಕಸಭಾ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಮೇ30ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ನಡುವೆ ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದಾರೆ. ವಾರಣಾಸಿಯ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಚುನಾವಣಾ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಿದ ಅವರು, ಇಂದು ಬೆಳಗ್ಗೆ ಕಾಶೀ ವಿಶ್ವನಾಥ ದೇವಾಲಯಕ್ಕೆ ತೆರಳಿ ವಿಶ್ವನಾಥನ ಸನ್ನಿಧಿಯಲ್ಲಿ ಧ್ಯಾನಾಸಕ್ತರಾದರು. ನರೇಂದ್ರ ಮೋದಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ. ದೇಗುಲದ ಗರ್ಭಗುಡಿಯ ಮುಂದೆ ಪದ್ಮಾಸನದಲ್ಲಿ ಕುಳಿತ ಮೋದಿ, ವಿಶ್ವನಾಥನಿಗೆ ಭಕ್ತಿಪೂರ್ವಕವಾಗಿ ಕೈ ಮುಗಿದು ದೀರ್ಘ ಕಾಲ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಧಾನ ಅರ್ಚಕರಿಂದ ತೀರ್ಥ ಸೇವಿಸಿದರು. ವಾರಣಾಸಿ ಜನತೆ ಮೋದಿಯವರ ವಿಜಯೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂಭ್ರಮದಿಂದ ಸಿದ್ಧರಾಗಿದ್ದರೆ, ತಮ್ಮ ಮೇಲೆ ನಂಬಿಕೆ ಇಟ್ಟು ಪ್ರಚಂಡ ಬಹುಮತದಿಂದ ಜಯಗಳಿಸಲು ನೆರವಾದ ಕ್ಷೇತ್ರದ ಮತದಾರರಿಗೆ ಮೋದಿ ಧನ್ಯವಾದ ಸಮರ್ಪಿಸಲಿದ್ದಾರೆ. : . # # # #