ವಿಶ್ವಕಪ್ ಕ್ರಿಕೆಟ್: ಭ್ರಷ್ಟಾಚಾರ ತಡೆಗೆ ಐಸಿಸಿ ಹೊಸ ಪ್ಲಾನ್ ದುಬೈ, ಮೇ 15, 2019 (..): ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿ ವೇಳೆ ಭ್ರಷ್ಟಾಚಾರ ತಡೆಯಲು ಹೊಸ ಯೋಜನೆ ರೂಪಿಸಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ 10 ತಂಡಗಳಿಗೆ ಪ್ರತ್ಯೇಕ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಯನ್ನು ಐಸಿಸಿ ನೇಮಿಸಲಿದೆ. ಅಭ್ಯಾಸ ಪಂದ್ಯದಿಂದ ಹಿಡಿದು ಟೂರ್ನಿ ಕೊನೆಗೊಳ್ಳುವ ವರೆಗೂ ಆ ಅಧಿಕಾರಿ ತಂಡದೊಂದಿಗೆ ಇರಲಿದ್ದಾರೆ. ಈ ಮೊದಲು ಪಂದ್ಯಗಳು ನಡೆಯುವ ಸ್ಥಳಗಳಲ್ಲಿ ಅಧಿಕಾರಿಗಳು ಇರುತ್ತಿದ್ದರು. ಆದರೆ ಈ ಬಾರಿ ಅಧಿಕಾರಿಗಳು ತಂಡದೊಂದಿಗೆ ಪ್ರಯಾಣಿಸಲಿದ್ದು, ಆಟಗಾರರು ಉಳಿದುಕೊಳ್ಳುವ ಹೋಟೆಲ್‌ನಲ್ಲೇ ಉಳಿದುಕೊಳ್ಳಲಿದ್ದಾರೆ. ಪಂದ್ಯಗಳ ನಡುವೆ ಅಭ್ಯಾಸ, ಪತ್ರಿಕಾಗೋಷ್ಠಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವೇಳೆಯೂ ಆಟಗಾರರ ಜತೆ ಅಧಿಕಾರಿ ತೆರಳಲಿದ್ದಾರೆ.