ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ಶಿಫ್ಟ್… ಮೈಸೂರು,ಮೇ,11,2019(..): ಅಕ್ರಮ ಭೂ ಒತ್ತುವರಿ, ಸರ್ಕಾರಿ ಅಧಿಕಾರ ದುರ್ಬಳಕೆ ಆರೋಪದಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್ ವಿಚಾರಣೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆಯಾಗಿದೆ. ಮೈಸೂರು ಕೋರ್ಟ್ ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಿ ನಾಗರೀಕ ಹಿರಿಯ ನ್ಯಾಯಾಧಿಶ, ಸಿಜೆಎಂ ಯಶವಂತ‌ ಕುಮಾರ್ ‌ ಮಹತ್ವದ ಆದೇಶ ಹೊರಡಿಸಿದ್ದಾರೆ. ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಸಿದ್ದರಾಮಯ್ಯ ವಿರುದ್ದ ಮೈಸೂರು ಹಿನಕಲ್ ಪಂಚಾಯ್ತಿ‌ ವ್ಯಾಪ್ತಿಯಲ್ಲಿ ಅಕ್ರಮ ಭೂ ಸ್ವಾಧೀನ ಆರೋಪ ಕೇಳಿ ಬಂದಿತ್ತು. ಸಾಕಮ್ಮ ಎಂಬುವವರ ಸರ್ವೇನಂ 70/4a ನಲ್ಲಿ ಭೂಸ್ವಾದೀನ ಮಾಡಿರಲಿಲ್ಲ. ಸಾಕಮ್ಮ ಎಂಬುವವರ ಸ್ವಾಧೀನವಾಗದ ಜಮೀನನನ್ನ ಸಿದ್ದರಾಮಯ್ಯ ಖರೀದಿ ಮಾಡಿದ್ದರು. ನಂತರ ಮುಡಾದಿಂದ ಅನುಮತಿ ಪಡೆಯದೆ ಸರ್ವೇ ನಂ70/4a ರಲ್ಲಿ ಸರ್ಕಾರಿ ಜಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆ ಕಟ್ಟಿದ್ದರು. ಇದಾದ ಬಳಿಕ ಸಿದ್ದರಾಮಯ್ಯ 2003ರಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ನಿಯಾಮಾವಳಿಗಳನ್ನ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿದ್ದಾರೆ. ಮುಡಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವರು ಸಿದ್ದರಾಮಯ್ಯ ವಿರುದ್ದ ಲಕ್ಷ್ಮೀಪುರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಕುರಿತು ಲಕ್ಷ್ಮೀಪುರಂ‌ ಪೊಲೀಸರು ಬಿ. ರಿಪೋರ್ಟ್ ಹಾಕಿದ್ದರು. ಈ ನಡುವೆ ಬಿ ರಿಪೋರ್ಟ್ ಬಗ್ಗೆ ಪ್ರಶ್ನಿಸಿ ದೂರುದಾರ ಗಂಗರಾಜ್ ನ್ಯಾಯಾಲಯದ‌ ಮೊರೆ ಹೋಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಅಂದಿನ ಮುಡಾ ಅಧ್ಯಕ್ಷ ಸಿ ಬಸವೇಗೌಡ, ಅಂದಿನ‌ ಮುಡಾ ಆಯುಕ್ತ ಧ್ರುವಕುಮಾರ್ , ಸದ್ಯ ಮುಡಾ ಆಯುಕ್ತ ಪಿ ಎಸ್ ಕಾಂತರಾಜ್ ವಿರುದ್ಧ ದೂರು ದಾಖಲಿಸಲಾಗಿದೆ. ಇದೀಗ ಪ್ರಕರಣದ ವಿಚಾರಣೆಯನ್ನ ಮೈಸೂರು ಕೋರ್ಟ್ ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸುಮಾರು 68 ದಾಖಲೆಗಳ ಪರಿಶೀಲನೆ ಮಾಡಲಾಗಿದ್ದು, ಬಾಕಿ 30 ಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಜೂನ್ 10 ರಂದು ಬೆಂಗಳೂರಿನ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪರಿಶೀಲನೆ ನಡೆಯಲಿದೆ. : –- - - - -.