ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಸರ್ಕಾರ ವಿಫಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ. ಬೆಂಗಳೂರು, ಅಕ್ಟೋಬರ್ 21,2023(..):‘ರಾಜ್ಯದಲ್ಲಿ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದ ಹೇಳಿಕೆ ಪ್ರಕಾರವೇ ಕೊರತೆ ಇರುವುದು 3 ಕೋಟಿ ಯುನಿಟ್ ಅಷ್ಟೇ. ಕೃತಕ ಅಭಾವ ಸೃಷ್ಟಿ ಮಾಡಿರುವುದು ಸರ್ಕಾರ. ವಿದ್ಯುತ್ ಉತ್ಪಾದನೆ ಬಗ್ಗೆ ಗಮನವನ್ನೇ ಕೊಡಲಿಲ್ಲ. ನನ್ನ ಕಾಲದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದೀವಾ? ದಾಖಲೆ ತೆಗೆಯಿರಿ ಎಂದು ಕಿಡಿಕಾರಿದರು. ಗ್ಯಾರಂಟಿ ಜಾರಿ ಮಾಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್​​ ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದರ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದಕ್ಕೊದಿಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ. ಬರೀ ಇಷ್ಟರಲ್ಲೇ ಸಮಯ ಕಳೆಯುತ್ತಿದ್ದಾರೆಯೇ ವಿನಃ ವಿದ್ಯುತ್​​ ಉತ್ಪಾದನೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ ಎಂದು ಹೆಚ್.ಡಿಕೆ ಹರಿಹಾಯ್ದರು. : – – – - - -