ಇರಾಕ್: ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ, ನೂರಾರು ಮಂದಿ ಸಾವು ಬೆಂಗಳೂರು, ಸೆಪ್ಟೆಂಬರ್ 27, 2023 (..):ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ. ಇರಾಕ್ನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇರಾಕ್ ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, ಘಟನೆಯ ಭೀಕರತೆಗೆ ಈ ದೃಶ್ಯಗಳು ಸಾಕ್ಷಿಯಾಗಿವೆ.