ಮೈಸೂರಲ್ಲಿ ಸತತ ಏಳು ಗಂಟೆ ಕೆಡಿಪಿ ಸಭೆ ನಡೆಸಿದ ಸಿದ್ದರಾಮಯ್ಯ: ಅಧಿಕಾರಿಗಳ ಮೈಚಳಿ ಬಿಡಿಸಿದ ಸಿಎಂ ! ಮೈಸೂರು, ಆಗಸ್ಟ್ 28, 2023 (..):ಮೈಸೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸತತ 7 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು, ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಜೈಲಿಗೆ ತಳ್ಳಿ. ಡ್ರಗ್ಸ್ ವಿಚಾರದಲ್ಲಿ ಮೈಸೂರು ವಲಯದಲ್ಲಿ ಝೀರೋ ಟಾಲರೆನ್ಸ್ ಇರಬೇಕು. ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಡ್ರಗ್ಸ್ ಮೇನಿಯಾ, ಮಾಫಿಯಾಗೆ ಅವಕಾಶ ಇರಬಾರದು ಎಂದು ಸಿಎಂ ಸೂಚನೆ ನೀಡಿದರು. ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆಯನ್ನು ಸಿಎಂ ನೀಡಿದರು. ಆದಿವಾಸಿಗಳಿಗೆ ೪ ತಿಂಗಳಿಂದ ಆಹಾರ ನೀಡುತ್ತಿಲ್ಲ ಎನ್ನುವ ವರದಿಗೆ ಸಂಬಂಧಪಟ್ಟಂತೆ ಗರಂ ಆದ ಮುಖ್ಯಮಂತ್ರಿಗಳು ನಿಮಗೆ ಆರು ತಿಂಗಳು ಸಂಬಳ ನಿಲ್ಲಿಸಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖಾವಾರು ಮಾಹಿತಿ ಪಡೆದು ಕೆಲ ಸೂಚನೆ ನೀಡಿದ ಸಿಎಂ ತೋಟಗಾರಿಕಾ ಇಲಾಖೆ ಆರೋಗ್ಯ ಇಲಾಖೆ: ನಗರಾಡಳಿತ: ಸಿಎ ಸೈಟ್ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಯಾವ ಉದ್ದೇಶಕ್ಕೆ ಸಿಎ ಸೈಟ್ಗಳನ್ನು ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದು ಬಳಕೆ ಆಗುತ್ತಿರಬೇಕು. ಇಲ್ಲದಿದ್ದರೆ ತಕ್ಷಣ ಅಂತಹ ಸೈಟ್ಗಳನ್ನು ವಾಪಾಸ್ ವಶಕ್ಕೆ ಪಡೆಯಬೇಕು ಎಂದು ಮೂಡಾ ಆಯುಕ್ತರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಮೈಸೂರು ಕ್ಲೀನ್ ಸಿಟಿಯಾಗಿ ಇನ್ನಷ್ಟು ಉನ್ನತೀಕರಿಸುವ ನಿಟ್ಟಿನಲ್ಲಿ ಪಾಲಿಕೆ, ಮುಡ, ಅರಣ್ಯ, ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಬಸ್ನಲ್ಲಿ ನಗರ ಪ್ರದಕ್ಷಿಣೆ ಮಾಡಿ ಪರಸ್ಪರ ಹೊಂದಾಣಿಕೆಯಿಂದ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲೇ ಇದು ನಡೆಯಬೇಕು ಎಂದು ಸೂಚಿಸಿದರು. ಹೊಸ ಬಡಾವಣೆಗಳಿಗೆ ಕಣ್ಣುಮುಚ್ಚಿಕೊಂಡು ಅನುಮತಿ ನೀಡಬಾರದು. ಮೈಸೂರಿನಲ್ಲೂ ಬೆಂಗಳೂರಿನಂತೆ ಅಕ್ರಮ ಬಡಾವಣೆಗಳು ಮತ್ತು ಅವೈಜ್ಞಾನಿಕ ಬಡಾವಣೆಗಳು, ಅಗತ್ಯ ಸೌಲತ್ತುಗಳಿಲ್ಲದ ಬಡಾವಣೆಗಳು ನಿರ್ಮಾಣವಾಗದಂತೆ ಕಟ್ಟುನಿಟ್ಟಾಗಿ ತಡೆಯಬೇಕು. ಶಿಕ್ಷಣ ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಹಿಂದುಳಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಬಿಇಒ ಕಚೇರಿಗಳಿಗೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಮೊದಲ ವಿಶ್ವ ವಿದ್ಯಾಲಯ ಆರಂಭವಾಗಿದ್ದು ಮೈಸೂರಿನಲ್ಲಿ. ಇಂಥಾ ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ ಹಿಂದುಳಿಯಬಾರದು ಎಂದು ಸೂಚನೆ ನೀಡಿದರು. ಶೂನ್ಯ ದಾಖಲಾತಿ ಶಾಲೆಗಳ ವ್ಯಾಪ್ತಿಯ ಪೋಷಕರ ಸಭೆ ನಡೆಸಬೇಕು. ಪೋಷಕರ ಅಭಿಪ್ರಾಯವನ್ನು ಸಮಗ್ರವಾಗಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಬೇಕು. ಕೇವಲ ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿಲ್ಲ ಎನ್ನುವ ವಾದ ವೈಜಾನಿಕವಲ್ಲ. ಶಿಕ್ಷಣದ ಗುಣಮಟ್ಟವೂ ಕಾರಣ ಆಗಿರುತ್ತದೆ. ಆದ್ದರಿಂದ ಗುಣಮಟ್ಟದ ಶೀಕ್ಷಣ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ ನೀಡುವುದೂ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ವರ್ಷ ಶಿಕ್ಷಣ ಸೂಚ್ಯಂಕದಲ್ಲಿ ಮೊದಲ ಐದು ಸ್ಥಾನಗಳ ಒಳಗೆ ಬರಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು. ಇಂಧನ ಇಲಾಖೆ: ಹಾಳಾದ ಟ್ರಾನ್ಸ್ಫಾರ್ಮರ್ ಗಳನ್ನು ನಿಗದಿತ ಅವಧಿಯಲ್ಲಿ ಬದಲಾಯಿಸದೆ ರೈತರಿಗೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮೆಸ್ಕಾಂ ಎಂಡಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ನೀವು ರೈತರ ಮತ್ತು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಸತಾಯಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೆ ನಿಗಧಿತ ಅವಧಿ ೭೨ ಗಂಟೆಯೊಳಗೆ ರಿಪೇರಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು. ಕುಡಿಯುವ ನೀರು: ಕುಡಿಯುವ ನೀರಿಗೆ ಕೊರತೆ ಆಗದಂತೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಎಷ್ಟೇ ಹಣ ಖರ್ಚಾದರೂ ಕೊಡಲು ನಾವು ಸಿದ್ದರಿದ್ದೇವೆ. ಕುಡಿಯುವ ನೀರಿನ ವಿಚಾರದಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಬಳಸಲು ಯಾವುದೇ ಅಡ್ಡಿ ಆಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು. ಸಾರಿಗೆ ಇಲಾಖೆ: ಕೊರೋನ ಅವಧಿಯಲ್ಲಿ ಬಂದ್ ಆಗಿರುವ ಬಸ್ ಮಾರ್ಗಗಳು ಪುನರ್ ಚಾಲನೆ ಆಗುವುದೂ ಸೇರಿದಂತೆ ಐದು ಜಿಲ್ಲೆಗಳ ಶಾಸಕರ ಸಭೆ ಕರೆದು ಹೊಸ ಬಸ್ ಮಾರ್ಗಗಳ ಅಗತ್ಯ ಎಲ್ಲೆಲ್ಲಿ ಇವೆ ಎನ್ನುವುದರ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.