ರಾಜ್ಯಾದ್ಯಂತ ಮುಂದುವರಿದ ಭಾರಿ ಮಳೆ: ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಶಾಲೆ-ಕಾಲೇಜಿಗೆ ರಜೆ ಬೆಂಗಳೂರು, ಜುಲೈ 26, 2023 (..):ರಾಜ್ಯಾದ್ಯಂತ ಭಾರಿ ಮಳೆ ಮುಂದುವರಿದಿದೆ. ಕೆಲ ಜಿಲ್ಲೆಯಲ್ಲಿ ಇಂದು ರೆಡ್‌ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ ಹಾಗೂ ಅಂಗನವಾಡಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ನಿಪ್ಪಾಣಿ, ಮೂಡಲಗಿ, ಯರಗಟ್ಟಿ, ಬೆಳಗಾವಿ ಹಾಗೂ ಸವದತ್ತಿ ತಾಲ್ಲೂಕನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಖಾನಾಪುರ ತಾಲೂಕಿನಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ ಬುಧವಾರ (ಜು‌.26) ಒಂದು ದಿನ ರಜೆ ಘೋಷಿಸಲಾಗಿದೆ. ಉತ್ತರಕನ್ನಡದ 4 ತಾಲೂಕುಗಳಲ್ಲಿ ಶಾಲೆಗೆ ರಜೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ನದಿ, ಹಳ್ಳ, ಕೆರೆ ದಡದತ್ತ ಸಾರ್ವಜನಿಕರು ಹೋಗಬಾರದು. ಯುವಕರು ಫೋಟೋ, ಸೇಲ್ಫಿ ಗೀಳಿಗೆ ಬೀಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.