ಹಣ ದೋಚಿ ಪರಾರಿಯಾಗುತ್ತಿದ್ದ ಕಳ್ಳನನ್ನ ಬೆನ್ನಟ್ಟಿ ಹಿಡಿದ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನ. ಬೆಂಗಳೂರು,ಜೂನ್,27,2023(..):ಪ್ರಯಾಣಿಕರ ಸೋಗಿನಲ್ಲಿ ಬಂದು ದಂಪತಿಯ 5 ಲಕ್ಷ ರೂ ದೋಚಿ ಪರಾರಿಯಾಗುತ್ತಿದ್ದ ಕಳ್ಳರನ್ನ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಸಹಾಯ ಮಾಡಿದ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಬೆಂಗಳೂರು ಪೊಲೀಸ್ ಆಯುಕ್ತರು ಸನ್ಮಾನಿಸಿ ಗೌರವಿಸಿದರು. ಇದೇ ಜೂನ್ 14 ರಂದು ನಿಗಮದ ವಾಹನದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ ಕಳ್ಳರು ಪ್ರಯಾಣಿಕ ದಂಪತಿಯ ಬಳಿ ಇದ್ದ ರೂ .5 ಲಕ್ಷಗಳನ್ನು ಕದ್ದು ಓಡಿ ಹೋಗುತ್ತಿದ್ದರು. ಈ ವೇಳೆ ಅವರನ್ನು ನಿಗಮದ ಬೆಂಗಳೂರು ಕೇಂದ್ರ ವಿಭಾಗದ ನಾಲ್ಕನೇ ಘಟಕದ ಚಾಲಕ ಮಂಜುನಾಥ ಹಾಗೂ ಚಾಲಕ ಮತ್ತು ನಿರ್ವಾಹಕ ಸೋಮಪ್ಪ ಟಿ ಎನ್ ಅವರು ಬೆನ್ನಟ್ಟಿ ಹಿಡಿದಿದ್ದರು. ಪೊಲೀಸರಿಗೆ ಸಹಾಯ ಮಾಡಿ ಕಳ್ಳರನ್ನು ಹಿಡಿಯಲು‌ ಸಹಕರಿಸಿದ‌ ಮಂಜುನಾಥ ಮತ್ತು ಸೋಮಪ್ಪ ಟಿ.ಎನ್ ಅವರ ಸಾಹಸ ಮತ್ತು ಧೈರ್ಯವನ್ನು ಮೆಚ್ಚಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸನ್ಮಾನಿಸಿ, ರೂ. 5000 ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. : –- -- –