‘ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ’ ಎಂದಿದ್ದ ಕಟೀಲ್ ಗೆ ಸಚಿವ ದಿನೇಶ್ ಗುಂಡೂರಾವ್ ಟಾಂಗ್. ಬೆಂಗಳೂರು,ಜೂನ್,23,2023(..):ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ. ಇತರೇ ರಾಜ್ಯಗಳಿಗೆ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸಚಿವ ದಿನೇಶ್ ಗುಂಡೂರಾವ್ ಟ್ವಿಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಕಟೀಲ್‌ ರವರೇ,ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ. ನಿಮ್ಮ ಈ ಮನೆಮುರಕುತನಕ್ಕೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ‌.‌ ಆದರೂ ನಿಮಗೆ ಬುದ್ದಿ ಬಂದಿಲ್ಲ. ಕೇಂದ್ರ ಎಲ್ಲವನ್ನೂ ಕರ್ನಾಟಕಕ್ಕೆ ಕೊಡಲಿ ಎಂಬ ಸ್ವಾರ್ಥ ನಮ್ಮಲಿಲ್ಲ. ಗೋದಾಮುಗಳಲ್ಲಿ ಅಕ್ಕಿಯನ್ನು ಕೊಳೆಯಿಸುವ ಬದಲು ಬಡವರಿಗೆ ಕೊಡಿ ಎಂದಿದ್ದೇವೆ. ಅದೂ ಮಾರುಕಟ್ಟೆ ದರದಲ್ಲಿ. ಇದು ತಪ್ಪೆ? ಎಂದು ಪ್ರಶ್ನಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯ ಒಂದೇ ಎರಡೇ?.. ಕಟೀಲ್‌ ರವರೇ, ಕೇಂದ್ರದ ನಿಮ್ಮ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಒಂದೇ ಎರಡೇ? ಬಾಕಿಯಲ್ಲಿ ಮೋಸ, ಪರಿಹಾರದಲ್ಲಿ ಮೋಸ, ನೆರೆ ಪರಿಹಾರದಲ್ಲಿ ಮೋಸ, ಬರ ಪರಿಹಾರದಲ್ಲೂ ಮೋಸ, ಯೋಜನೆ ಅನುಷ್ಠಾನದಲ್ಲೂ ಮೋಸ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡಿರುವ ಮೋಸದ ಪಟ್ಟಿ ಹೇಳುತ್ತಾ ಹೋದರೆ ಪುಸ್ತಕವೇ ಬರೆಯಬಹುದು. ಹೌದಲ್ಲವೇ.? ಎಂದು ನಳೀನ್ ಕುಮಾರ್ ಕಟೀಲ್ ಗೆ ಕುಟುಕಿದ್ದಾರೆ. ಕಟೀಲ್‌ ರವರೇ, ನೀವು ಈ ರಾಜ್ಯದ ಮನೆ ಮಗನಾಗಿ ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಹೆಗಲು ಕೊಡಬೇಕು. ರಾಜ್ಯದ ಬಡವರಿಗೆ ಅಕ್ಕಿ ಕೊಡದೇ ದ್ವೇಷದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ನಾಯಕರಿಗೆ ತಿಳಿಹೇಳಬೇಕು. ಅದು ಬಿಟ್ಟು ಮೋದಿಯವರ ದ್ವೇಷದ ಬೆಂಕಿಗೆ ನೀವೆ ತುಪ್ಪ ಸುರಿದರೆ ಬಡವರ ಶಾಪ ನಿಮಗೆ ತಟ್ಟದಿರುತ್ತದೆಯೇ? ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. : - - –- .